ಸಮಗ್ರ ನ್ಯೂಸ್: ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡಿದಾಗಲೆಲ್ಲಾ ದೇಶದಲ್ಲಿ ಒಂದಲ್ಲಾ ಒಂದು ವಿಧ್ವಂಸಕ ಕೃತ್ಯ ನಡೆಯುತ್ತದೆ ಎಂದು ಕರ್ನಾಟಕ ಬಿಜೆಪಿ ಗಂಭೀರ ಆರೋಪ ಮಾಡಿದೆ. ರಾಹುಲ್ ಗಾಂಧಿ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಆದರೆ ಈಗ ಪೆಹಲ್ಗಾಮ್ ನಲ್ಲಿ ಉಗ್ರ ದಾಳಿ ವಿಚಾರ ತಿಳಿಯುತ್ತಿದ್ದಂತೇ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಭಾರತಕ್ಕೆ ವಾಪಸಾಗಲು ತೀರ್ಮಾನಿಸಿದ್ದಾರೆ.
ಇದರ ನಡುವೆ ಕರ್ನಾಟಕ ಬಿಜೆಪಿ ಘಟಕ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಇಂತಹದ್ದೊಂದು ಪೋಸ್ಟ್ ಮಾಡಿದೆ. ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡುವಾಗಲೆಲ್ಲಾ ಭಾರತದಲ್ಲಿ ಯಾಕೆ ಅವಘಡಗಳು ನಡೆಯುತ್ತಿವೆ ಎಂದು ಪ್ರಶ್ನೆ ಮಾಡಿದೆ.
ಇದಕ್ಕೆ ಹಲವರು ಕಾಮೆಂಟ್ ಮಾಡಿದ್ದು ಹಾಗಿದ್ದರೆ ಮೋದಿ ಕೂಡಾ ವಿದೇಶ ಪ್ರವಾಸದಲ್ಲಿದ್ದರು. ಅದರಲ್ಲೂ ಇಸ್ಲಾಮಿಕ್ ರಾಷ್ಟ್ರದಲ್ಲಿದ್ದರು. ಇದಕ್ಕೆ ಏನು ಕಾರಣ ಇರಬಹುದು ಅಂತೀರಿ ಎಂದು ಮರುಪ್ರಶ್ನೆ ಮಾಡಿದ್ದಾರೆ. ಇಂತಹ ರಾಜಕೀಯ ಮಾತನಾಡಲು ಇದು ಸರಿಯಾದ ಸಮಯವಲ್ಲ ಎಂದು ಹಲವರು ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ರಾಜ್ಯ ಬಿಜೆಪಿ ಐಟಿ-ಸೋಷಿಯಲ್ ಮೀಡಿಯಾ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ಕರ್ನಾಟಕ ಐಟಿ ಮತ್ತು ಸೋಶಿಯಲ್ ಮೀಡಿಯಾ ಅಡ್ಮಿನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.