ಸಮಗ್ರ ನ್ಯೂಸ್: ವಾಹನ ಸವಾರರಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೆದ್ದಾರಿಗಳಲ್ಲಿ ವಾಹನಗಳನ್ನು ನಿಲ್ಲಿಸದೆ ಟೋಲ್ ಸಂಗ್ರಹಿಸುವ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಮೇ 1ರಿಂದ ಜಾರಿಗೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ. ಅಂದರೆ, ಟೋಲ್ ಪ್ಲಾಜಾಗಳಲ್ಲಿ ವಾಹನ ಚಾಲಕರು ತಮ್ಮ ವಾಹನವನ್ನು ನಿಲ್ಲಿಸದೆ, ಸುಮ್ಮನೆ ಪ್ಲಾಜಾ ಮೂಲಕ ಸಾಗಿದರೂ ಸಾಕು, ವಾಹನ ಚಾಲಕರ ಖಾತೆಯಿಂದ ಹಣ ಕಡಿತವಾಗುತ್ತದೆ.
ಹೊಸ ಟೋಲ್ ನೀತಿಯ ಜಾರಿಯಿಂದಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಗೆ ವಾಹನ ನಿಲ್ಲಿಸುವ ಅವಶ್ಯಕತೆ ಇಲ್ಲ. ಇದರಿಂದ ಸಮಯ ಉಳಿಯುತ್ತದೆ. ಹಾಗೆಯೇ, ವಾಹನಗಳು ನಿರಂತರವಾಗಿ ಸಾಗುತ್ತಲೇ ಇರುವುದರಿಂದ ಇಂಧನವೂ ಉಳಿಯಲಿದೆ ಎಂದು ಹೇಳಲಾಗುತ್ತಿದೆ. ಮೇ 1ರಿಂದ ಕೇಂದ್ರ ಸರ್ಕಾರವು ಹಂತ ಹಂತವಾಗಿ ಈ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹದ ಕುರಿತು ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ.
ಸ್ಯಾಟಲೈಟ್ ಆಧಾರಿತ ನ್ಯಾವಿಗೇಶನ್ ಹಾಗೂ ಟೋಲ್ ಸಿಸ್ಟಮ್ ಇದಾಗಿದೆ. ಉಪಗ್ರಹ ಮೂಲಕ ವಾಹನ ಟ್ರಾಕ್ ಮಾಡಿ ಶುಲ್ಕ ವಿಧಿಸಲಾಗುತ್ತದೆ. ಹೆದ್ದಾರಿ ಅಥವಾ ಎಕ್ಸ್ಪ್ರೆಸ್ ವೇಗೆ ವಾಹನ ಎಂಟ್ರಿಕೊಟ್ಟ ಬೆನ್ನಲ್ಲೇ ಜಿಎನ್‌ಎಸ್‌ಎಸ್ ಟ್ರ್ಯಾಕ್ ಮಾಡಲಿದೆ. ಬಳಿಕ ವಾಹನ ಹೆದ್ದಾರಿಯಿಂದ ಅಂದರೆ ಟೋಲ್ ರಸ್ತೆಯಿಂದ ಎಕ್ಸಿಟ್ ಆಗುವ ವರೆಗಿನ ಕಿಲೋಮಟರ್ ಹಾಗೂ ಹೆದ್ದಾರಿಗೆ ಅನುಗುಣವಾಗಿ ಟೋಲ್ ಶುಲ್ಕ ವಿಧಿಸಲಿದೆ.
ಜಿಪಿಎಸ್ ಆಧಾರಿತವಾಗಿ ಶುಲ್ಕವನ್ನು ವಾಹನದ ರಿಜಿಸ್ಟ್ರೇಶನ್ ನಂಬರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳಲಿದೆ. ಅಂದರೆ ಇದೀಗ ಫಾಸ್ಟ್ ಟ್ಯಾಗ್ ಹೇಗೆ ಬ್ಯಾಂಕ್ ಖಾತೆ ಜತೆ ಲಿಂಕ್ ಮಾಡಲಾಗುತ್ತದೋ ಹಾಗೆ ಇಲ್ಲೂ ಕೂಡ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತಗೊಳ್ಳಲಿದೆ. ಇದಕ್ಕಾಗಿ ವಾಹನಗಳಲ್ಲಿ ಆನ್ ಬೋರ್ಡ್ ಯುನಿಟ್ (OBU) ಅಳವಡಿಸಲಾಗುತ್ತದೆ. ಇದರಿಂದ ಹೆದ್ದಾರಿ ಅಥವಾ ಟೋಲ್ ರಸ್ತೆಯಲ್ಲಿ ವಾಹನ ಎಷ್ಟು ದೂರ ಸಾಗಿದೆ ಅದರ ಮೇಲೆ ನಿಖರವಾಗಿ ಟೋಲ್ ಸಂಗ್ರಹ ಮಾಡಲಾಗುತ್ತದೆ.