ಸಮಗ್ರ ನ್ಯೂಸ್: ಡೀಸೆಲ್, ಟೋಲ್, ಎಫ್.ಸಿ. ಶುಲ್ಕ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ ಎ.14ರಸೋಮವಾರ ಮಧ್ಯರಾತ್ರಿಯಿಂದ ಮುಷ್ಕರಕ್ಕೆ ಕರೆ ನೀಡಿದೆ.
2024ರ ಜೂನ್ ನಲ್ಲಿ ರಾಜ್ಯ ಸರ್ಕಾರ ಪ್ರತಿ ಲೀಟರ್ ಡೀಸೆಲ್ ದರವನ್ನು ಮೂರು ರೂಪಾಯಿ ಹೆಚ್ಚಳ ಮಾಡಿದ್ದು, ಈಗ ಯಾವುದೇ ಮುನ್ಸೂಚನೆ ನೀಡದೆ ಏಪ್ರಿಲ್ 1ರಿಂದ ಏಕಾಏಕಿ ಎರಡು ರೂಪಾಯಿ ದರ ಹೆಚ್ಚಳ ಮಾಡಿ ಲಾರಿ ಉದ್ಯಮದ ಮೇಲೆ ಬರೆ ಎಳೆದಿದೆ ಎಂದು ದೂರಲಾಗಿದೆ.
ರಾಜ್ಯದಲ್ಲಿ ಒಟ್ಟು 18 ರಾಜ್ಯ ಹೆದ್ದಾರಿ ಟೋಲ್ ಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿದ್ದು, ಪ್ರತಿ ವಾಹನಕ್ಕೆ ರಸ್ತೆ ತೆರಿಗೆ, ಡೀಸೆಲ್ ಮೇಲೆ ರಸ್ತೆ ಸೆಸ್ ಕಟ್ಟಲಾಗುತ್ತಿದೆ. ವಾಹನ ಚಾಲಕರಿಗೆ ಮೂಲ ಸೌಕರ್ಯ, ರಸ್ತೆ ಅಪಘಾತ ತಡೆಯಲು ಕ್ರಮ ಕೈಗೊಳ್ಳದೆ ಕೇವಲ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಒತ್ತಾಯಿಸಿದ್ದಾರೆ.
ಅನೇಕ ರಾಜ್ಯಗಳಲ್ಲಿ ಈಗಾಗಲೇ ಬಾರ್ಡರ್ ಚೆಕ್ ಪೋಸ್ಟ್ ಗಳನ್ನು ರದ್ದು ಮಾಡಲಾಗಿದೆ. ಕರ್ನಾಟಕ ಗಡಿ ಭಾಗದಲ್ಲಿಯೂ ಚೆಕ್ ಪೋಸ್ಟ್ ಗಳನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಲಾಗಿದೆ.
ಆದರೆ ಈ ಮುಷ್ಕರಕ್ಕೆ ರಾಜ್ಯ ಲಾರಿ ಮಾಲಕರ ಅಸೋಸಿಯೇಶನ್ ಅಧ್ಯಕ್ಷ ಚನ್ನಾರೆಡ್ಡಿ ಅವರ ಬಣ ಬೆಂಬಲ ನೀಡಿಲ್ಲ. ಎರಡು ಬಣಗಳ ಮುಸುಕಿನ ಗುದ್ದಾಟದಿಂದಾಗಿ ಲಾರಿ ಮುಷ್ಕರದ ಬಗ್ಗೆ ಗೊಂದಲ ಮೂಡಿದೆ.