ಸಮಗ್ರ ನ್ಯೂಸ್: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಕೃತ್ಯ ಎಸಗಿದ ಆರೋಪಿ ಬಿಹಾರ ಮೂಲದ ರಿತೇಶ ಕುಮಾರ್ (35) ಎಂಬಾತ ಭಾನುವಾರ ಸಂಜೆ ನಗರದ ತಾರಿಹಾಳ ಸೇತುವೆ ಬಳಿ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ.
‘ತಾರಿಹಾಳ ಬಳಿ ಸ್ಥಳ ಪರಿಶೀಲನೆಗೆ ಕರೆದೊಯ್ದಾಗ ಪೊಲೀಸ್ ವಾಹನದ ಮೇಲೆ ಕಲ್ಲು ತೂರಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಅಶೋಕನಗರದ ಪಿಎಸ್‌ಐ ಅನ್ನಪೂರ್ಣ ಅವರು ಗಾಳಿಯಲ್ಲಿ ಗುಂಡು ಹಾರಿಸಿದರೂ ಆರೋಪಿ ತಪ್ಪಿಸಿಕೊಂಡು ಓಡಲು ಯತ್ನಿಸಿದ. ಈ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದಾಗ ಆತನ ಕಾಲಿಗೆ ಹಾಗೂ ಬೆನ್ನಿಗೆ ಗುಂಡು ತಗುಲಿದೆ’ ಎಂದು ಘಟನೆ ಕುರಿತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಗಾಯಗೊಂಡಿದ್ದ ಅವನನ್ನು ತಕ್ಷಣ ಕೆಎಂಸಿ-ಆರ್‌ಐ ಆಸ್ಪತ್ರೆಗೆ ತರಲಾಯಿತು. ಅಷ್ಟರಲ್ಲಿ ಮೃತಪಟ್ಟಿದ್ದ. ಪೊಲೀಸ್ ಸಿಬ್ಬಂದಿ ಯಶವಂತ ಮೊರಬ ಮತ್ತು ವೀರೇಶ ಅವರೂ ಘಟನೆಯಲ್ಲಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ವಿವರಿಸಿದರು.
ಏನಿದು ಘಟನೆ?: ‘ಭಾನುವಾರ ಬೆಳಿಗ್ಗೆ 10.40ರ ಸುಮಾರಿಗೆ ವಿಜಯನಗರದಲ್ಲಿ ಐದು ವರ್ಷದ ಮಗು ನಾಪತ್ತೆಯಾದ ಕುರಿತು ಪ್ರಕರಣ ದಾಖಲಾಗಿತ್ತು. ನಂತರ, ಮಗು ನಾಪತ್ತೆಯಾದ ಸ್ಥಳದ ಎದುರಿರುವ ಶೆಡ್‌ನಲ್ಲಿ ಮೃತದೇಹ ಪತ್ತೆಯಾಗಿತ್ತು’ ಎಂದರು.
‘ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದಾಗ, ಕೃತ್ಯದ ಕುರಿತು ಮಾಹಿತಿ ನೀಡಿದ್ದ. ಆದರೆ, ತನ್ನ ವಿಳಾಸ ಹಾಗೂ ಗುರುತಿನ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಿರಲಿಲ್ಲ’ ಎಂದು ಹೇಳಿದರು.
‘ಬಿಹಾರ ಮೂಲದ ಅವನು, ವಿವಿಧ ಊರುಗಳಲ್ಲಿ ಕೆಲಸ ಮಾಡಿದ್ದ. ಹುಬ್ಬಳ್ಳಿಯಲ್ಲೂ ಕೆಲಸ ಮಾಡುತ್ತ, ತಾರಿಹಾಳ ಸೇತುವೆ ಬಳಿಯ ಹಳೇ ಶೆಡ್‌ನಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದ. ಅವನ ಜೊತೆ ಯಾರಿದ್ದಾರೆಂದು ತಿಳಿದುಕೊಳ್ಳಲು, ಅವನನ್ನು ಸ್ಥಳಕ್ಕೆ ಕರೆದುಕೊಂಡು ಹೋದಾಗ ಎನ್‌ಕೌಂಟರ್ ನಡೆದಿದೆ’ ಎಂದರು.
ಕೊಲೆ ಮಾಡಿದ್ದು ಹೇಗೆ? ‘ಬಿಹಾರ ಪಾಟ್ನಾದ ನಿವಾಸಿಯಾದ ಆರೋಪಿ ರಿತೀಶ ಕುಮಾರ್ ಭಾನುವಾರ ಬೆಳಿಗ್ಗೆ 10.40ರ ಸುಮಾರು ವಿಜಯನಗರದ ವಾಸವಾಗಿದ್ದ ಬಾಲಕಿಗೆ ತಿಂಡಿ ತಿನಿಸುಗಳನ್ನು ನೀಡುವುದಾಗಿ ಪುಸಲಾಯಿಸಿ ಕರೆದಿದ್ದಾನೆ. ನಂತರ ಅವಳನ್ನು ಎತ್ತಿಹಾಕಿಕೊಂಡು ಎದುರಿನ ಮನೆಯಲ್ಲಿರುವ ಶೆಡ್‌ಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆ ಕೂಗಿಕೊಂಡಾಗ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬಾಲಕಿಯ ಶವ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆತನನ್ನು ಹಿಡಿದು ಅಶೋಕ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಶಶಿಕುಮಾರ್ ತಿಳಿಸಿದರು.
‘ಮಗುವಿನ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಮಾಹಿತಿಯಿಲ್ಲ. ವೈದ್ಯಕೀಯ ವರದಿ ಬಂದ ನಂತರ ತಿಳಿಯಲಿದೆ. ಪೋಕ್ಸೊ ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದರು.
ಆರೋಪಿ ಎನ್‌ಕೌಂಟರ್‌ನಿಂದ ಮೃತಪಟ್ಟ ವಿಷಯ ತಿಳಿದು ಸಾರ್ವಜನಿಕರು ಪ್ರತಿಭಟನೆ ಕೈಬಿಟ್ಟು ಕೆಎಂಸಿ ಆಸ್ಪತ್ರೆ ಎದುರು ಸಂಭ್ರಮಿಸಿದರು. ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಜೈಕಾರ ಹಾಕಿದರು.