ಸಮಗ್ರ ನ್ಯೂಸ್: ಬೇಸಗೆಯ ಉಳಿದ ತಿಂಗಳುಗಳಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸ ಬೇಕು. ಗ್ರಾಮೀಣ ಭಾಗಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೇ ನೀರಿನ ಸಮಸ್ಯೆಗೆ ಹೊಣೆಗಾರರು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಗೂ ಮಳೆಗಾಲದಲ್ಲಿ ಆಗಬಹುದಾದ ಪ್ರಾಕೃತಿಕ ವಿಕೋಪ ಎದುರಿಸಲು ಸಿದ್ಧತೆ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆಯ ಡ್ಯಾಂಗಳಲ್ಲಿ ಪ್ರಸ್ತುತ ಅಗತ್ಯಕ್ಕೆ ತಕ್ಕಷ್ಟು ನೀರಿನ ಸಂಗ್ರಹ ಇದೆ. ಇರುವ ನೀರನ್ನು ಮುಂದಿನ ಎರಡು ತಿಂಗಳ ಕಾಲ ಸಮರ್ಪಕವಾಗಿ ಪೂರೈಕೆ ಮಾಡಬಹುದು. ಅಗತ್ಯವಾದರೆ ಕೈಗಾರಿಕೆಗಳಿಗೆ ನೀರು ಪೂರೈಕೆ ನಿಯಂತ್ರಿಸಿ, ನಿಗಾ ವಹಿಸಿ ಎಂದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಬಂಟ್ವಾಳ, ಸುಳ್ಯ, ಕಡಬ ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ಡ್ಯಾಂಗಳಲ್ಲಿ ನೀರಿನ ಸಂಗ್ರಹ ಚೆನ್ನಾಗಿದೆ. ಬಿಸಿಗಾಳಿಯ ಕಾರಣ ನೀರಿನ ಆವಿಯ ಪ್ರಮಾಣ ಹೆಚ್ಚಾಗಿದೆ. ಆದರೆ ಎಪ್ರಿಲ್ ಕೊನೆಗೆ ಹಾಗೂ ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಆಗುವ ಮುನ್ಸೂಚನೆ ಇದೆ ಎಂದರು.