ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಪ್ರಮುಖ ಪಟ್ಟಣ ಮೂಡುಬಿದಿರೆ ಶಿಕ್ಷಣ ಸಂಸ್ಥೆಗಳಿಗೆ ಫೇಮಸ್. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಸರುವಾಸಿ ಎಂಬುದಷ್ಟೇ ನಮಗೆ ಗೊತ್ತು. ಆದರೆ ಮರುಭೂಮಿ ದೇಶಗಳಲ್ಲೂ ಇದರ ಹೆಸರು ರಾರಾಜಿಸುತ್ತಿರುವುದು ಗೊತ್ತಾ?
ತುಳುವಿನಲ್ಲಿ ಮಂಗಳೂರಿಗೆ ಕುಡ್ಲ, ಮೂಡುಬಿದಿರೆಗೆ ಬೆದ್ರ, ಕಾರ್ಕಳಕ್ಕೆ ಕಾರ್ಲ, ಉಪ್ಪಿನಂಗಡಿಗೆ ಉಬಾರ್ ಹೀಗೆ ಸ್ಥಳೀಯ ಸೊಗಡಿನ ಹೆಸರುಗಳಿವೆ. ಊರವರು ಎಲ್ಲಿ ಹೋದರೂ ತಮ್ಮತನವನ್ನು ಬಿಡುವುದಿಲ್ಲ ಎಂಬುದಕ್ಕೆ ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಓಡಾಡುವ ಬಸ್ ನೋಡಿದರೆ ಗೊತ್ತಾಗುತ್ತದೆ. ಕನ್ನಡ ಲಿಪಿಯಲ್ಲಿ ಬೆದ್ರ ಎಂದು ಬರೆಯಲಾಗಿರುವ ಈ ಹೆಸರಿನ ಫೊಟೋ ಈಗ ಭಾರಿ ವೈರಲ್ ಆಗುತ್ತಿದೆ.
ದೂರದ ಊರಿನ ಬಸ್ ಒಂದರಲ್ಲಿ ತುಳುನಾಡಿನ ಹೆಸರು ಹೇಗೆ ಬಂತು? ಅಲ್ಲಿ ಬಸ್ ಓಡಿಸುತ್ತಿರುವವರು ಮೂಡುಬಿದಿರೆ ತಾಲೂಕು ಕಲ್ಲಬೆಟ್ಟು ಪ್ರದೇಶದ ಮೊಹಮ್ಮದ್ ಆಲಿ. ಅವರು ತಮ್ಮ ಬಸ್ ಹಿಂಬದಿಯ ಗಾಜಿನಲ್ಲಿ ಬೆದ್ರ ಎಂದು ಬರೆದು ತಮ್ಮ ಹುಟ್ಟೂರ ಪ್ರೇಮವನ್ನು ಪ್ರಕಟಿಸಿದ್ದಾರೆ. ದೂರದ ಸೌದಿಯಲ್ಲಿದ್ದರೂ ಊರಲ್ಲಿರುವ ಫೀಲ್ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ತನ್ನ ಹುಟ್ಟೂರ ಪ್ರೀತಿಯನ್ನು ತಾನು ಕೆಲಸ ಮಾಡುತ್ತಿರುವ ಸೌದಿಯಲ್ಲಿ ಪಸರಿಸುತ್ತಿದ್ದಾರೆ. ಸೌದಿಯಲ್ಲಿ ಅವರು ಸ್ವಂತ ಬಸ್ ಹೊಂದಿದ್ದು, ಮಕ್ಕಾ, ಮೆದೀನಾದಂಥ ಪವಿತ್ರ ಕ್ಷೇತ್ರಗಳಿಗೆ ಯಾತ್ರಾರ್ಥಿಗಳನ್ನು ಬಾಡಿಗೆಗೆ ಕರೆದುಕೊಂಡು ಹೋಗುತ್ತಾರೆ. ಉಳಿದ ಸಮಯದಲ್ಲಿ ಇತರ ಕೆಲಸಗಳಿಗೆ ಬಸ್ ಬಳಕೆಯಾಗುತ್ತದೆ.
ಹಲವು ವರ್ಷಗಳಿಂದ ಸೌದಿಯಲ್ಲಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಆಲಿ ಅವರಿಗೆ ತಾನು ಕೆಲಸ ಮಾಡುತ್ತಿರುವ ಸೌದಿಯ ಜುಬೈಲ್‌ನಲ್ಲಿ ಮೂಡುಬಿದಿರೆ ಸ್ನೇಹಿತರಿರುವುದು ಕಂಡುಬಂತು. ಹೀಗಾಗಿ ಹುಟ್ಟೂರಿನ ಪ್ರೀತಿ, ಅಭಿಮಾನದಿಂದ ಬಸ್ ಹಿಂಬದಿಯ ಗಾಜಿನಲ್ಲಿ ಬೆದ್ರ ಎಂದು ಬರೆದು ಅಭಿಮಾನ ವ್ಯಕ್ತಪಡಿಸಿದರು.