ಸಮಗ್ರ ನ್ಯೂಸ್: ದಕ್ಷಿಣ ಭಾರತದ ನಾಗಾರಾಧನೆಯ ಪುಣ್ಯ ಕ್ಷೇತ್ರ, ರಾಜ್ಯದ ಶ್ರೀಮಂತ ದೇವಾಲಯದಲ್ಲಿ ಒಂದಾದ ಪ್ರಸಿದ್ದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ಕಳೆದೆರಡು ತಿಂಗಳಿಂದ ಭಾರೀ ರಾಜಕೀಯ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ.
ರೌಡಿಶೀಟರ್‌ಗೆ ಸ್ಥಾನ ಕಲ್ಪಿಸಿಕೊಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆಂಬ ಆರೋಪದ ಬೆನ್ನಲ್ಲೇ ದೇಗುಲಕ್ಕೆ ಪ್ರಮುಖವಾಗಿರುವ ಮಲೆಕುಡಿಯ ಜನಾಂಗವನ್ನು ನಿರ್ಲಕ್ಷಿಸಿರುವ ಆರೋಪ ಕೂಡ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿಯಲ್ಲಿ ಮಾಜಿ ರೌಡಿಶೀಟರ್‌ಗೆ ಸ್ಥಾನ ಕಲ್ಪಿಸಿಕೊಡಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದ್ದು ಅದಕ್ಕೆ ಸಂಬಂಧಿಸಿದಂತೆ ಫೋಟೋವೊಂದು ವೈರಲ್ ಆಗಿದೆ.
ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ಸಚಿವ ದಿನೇಶ್ ಗುಂಡೂರಾವ್ ಓರ್ವ ಮಾಜಿ ರೌಡಿಶೀಟರ್ ಹಾಗೂ ದೇವಸ್ಥಾನಕ್ಕೆ ಈ ಹಿಂದೆ ದ್ರೋಹ ಬಗೆದು ಜೈಲಿನಲ್ಲಿದ್ದ ಗ್ರಾಮ ಪಂಚಾಯತಿ ಸದಸ್ಯನ ಹೆಸರನ್ನು ಶಿಫಾರಸು ಮಾಡಿರುವುದು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಮಾತ್ರವಲ್ಲ ಈತ ನೇರವಾಗಿ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನದ ಮೇಲೆಯೇ ಕಣ್ಣಿಟ್ಟಿದ್ದಾನೆ.
ಈ ವಿವಾದ ನಡೆಯಲು ಪ್ರಮುಖ ಕಾರಣವಿದೆ. ಈ ವ್ಯಕ್ತಿ ಓರ್ವ ಮಾಜಿ ರೌಡಿಶೀಟರ್ ಆಗಿದ್ದು, ದೇವಸ್ಥಾನದ ಆವರಣದಲ್ಲಿ ಈತನ ಒಡೆತನದಲ್ಲಿ ಪೂಜಾ ಪರಿಕರಗಳ ಅಂಗಡಿಗಳಿವೆ. ದೇವಸ್ಥಾನದ ಹಣ್ಣುಕಾಯಿ ಮಳಿಗೆಗಳ ಟೆಂಡರ್ನಲ್ಲಿ ಈ ಹಿಂದೆ ನಕಲಿ ಚೆಕ್ ನೀಡಿ ಈತ ದೇವಸ್ಥಾನಕ್ಕೆ ವಂಚನೆ ಮಾಡಿದ್ದ. ಈ ಬಗ್ಗೆ ಆಡಳಿತ ಮಂಡಳಿ ನೀಡಿದ ದೂರಿನ ಅನ್ವಯ ಆತ ಜೈಲಿಗೂ ಹೋಗಿ ಬಂದಿದ್ದ. ಮಾತ್ರವಲ್ಲ ಈತನ ವಿರುದ್ಧ ಮರಳು ಮಾಫಿಯಾ, ಮರ ಕಳ್ಳ ಸಾಗಣೆಯಲ್ಲಿ ತೊಡಗಿರುವ ಆರೋಪವೂ ಇದೆ ಎನ್ನಲಾಗಿದೆ.
ತಾನು ಕಾಂಗ್ರೆಸ್ ಮುಖಂಡ ಅಂತ ಹೇಳಿಕೊಂಡು ಮಾಜಿ ಸಚಿವರೊಬ್ಬರ ಮೂಲಕ ಶಿಫಾರಸು ಪಟ್ಟಿಯಲ್ಲಿ ತನ್ನ ಹೆಸರು ಬರುವಂತೆ ಮಾಡಿದ್ದಾನೆ. ಹೀಗಾಗಿ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ಸಹಿಯುಳ್ಳ ಪತ್ರವೊಂದರಲ್ಲಿ ಈತನ ಹೆಸರಿದ್ದು, ಗ್ರಾಮಸ್ಥರು ಇದನ್ನು ನೋಡಿ ಕೆರಳಿದ್ದಾರೆ. ಇದೀಗ ಈತನಿಗೆ ಸ್ಥಾನ ನೀಡಬಾರದು, ಇಂತಹ ಸದಸ್ಯ ನಮಗೆ ಬೇಡ ಅಂತ ಗ್ರಾಮಸ್ಥರು ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದೇಗುಲದ ಇತಿಹಾಸದ ಪ್ರಕಾರ ಇಲ್ಲಿನ ಆದಿವಾಸಿ ಮಲೆಕುಡಿಯ ಜನಾಂಗದವರಿಗೆ ಪ್ರಾಮಖ್ಯ ಹೆಚ್ಚು. ಇದಕ್ಕೆ ತನ್ನದೇ ಆದ ಹಿನ್ನೆಲೆ ಇದೆ. ಕುಕ್ಕೆಯಲ್ಲಿನ ರಥೋತ್ಸವಗಳಲ್ಲಿ ಮಲೆಕುಡಿಯ ಜನಾಂಗದವರೇ ಮುಖ್ಯ, ಇದು ಆ ದೇಗುಲದ ಪರಂಪರೆ. ಹೀಗಾಗಿ ಪ್ರತಿ ಬಾರಿ ಒಂದು ಸದಸ್ಯ ಸ್ಥಾನವನ್ನು ಮಲೆಕುಡಿಯ ಜನಾಂಗಕ್ಕೆ ಮೀಸಲಿಡಲಾಗಿದೆ. ಈ ಬಾರಿ ಸಚಿವರು ಮಲೆಕುಡಿಯ ಜನಾಂಗವನ್ನು ಬಿಟ್ಟು ಬೇರೆಯವರಿಗೆಲ್ಲ ಶಿಫಾರಸ್ಸು ಮಾಡಿದ್ದಾರೆಂದು ಮಲೆಕುಡಿಯ ಜನಾಂಗ ಕೆರಳಿದೆ.