ಸಮಗ್ರ ನ್ಯೂಸ್: ಎರಡು ವರ್ಷಗಳಿಂದ ತೀವ್ರ ಸ್ವರೂಪದ ಹವಾಮಾನ ವೈಪರೀತ್ಯದಿಂದ ಅಡಿಕೆ ತೋಟದಲ್ಲಿ ಭಾರೀ ಪ್ರಮಾಣದ ಫಸಲು ಕುಸಿತ ಉಂಟಾದ ಪರಿಣಾಮ ಮಾರುಕಟ್ಟೆಯಲ್ಲಿ ಅಡಿಕೆ ಕೊರತೆ ಉದ್ಭವಿಸಿದೆ.
ಹಾಗಾಗಿ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಸ್ಥಿರವಾಗಿದ್ದ ಡಬ್ಬಲ್ ಚೋಲ್ ಧಾರಣೆಯಲ್ಲಿ ಏರಿಕೆ ಲಕ್ಷಣ ಕಂಡು ಬಂದಿದೆ. ಹೊರ ಮಾರುಕಟ್ಟೆಯಲ್ಲಿ ಡಬ್ಬಲ್ ಚೋಲ್ ಧಾರಣೆ ಕೆ.ಜಿ.ಗೆ 502 ರೂ. ದಾಖಲಾಗಿದೆ.
ಅಡಿಕೆ ಮಾತ್ರವಲ್ಲದೆ ರಬ್ಬರ್, ತೆಂಗಿನಕಾಯಿ, ಕಾಳುಮೆಣಸು ಧಾರಣೆಯು ಹೆಚ್ಚಳ ಕಾಣುತ್ತಿದ್ದು ಉಪ ಬೆಳೆಗಳು ಕೃಷಿಕರಿಗೆ ವರದಾನ ಆಗುವ ನಿರೀಕ್ಷೆ ಮೂಡಿಸಿದೆ. ಪ್ರಮುಖ ಬೆಳೆ ಅಡಿಕೆ, ರಬ್ಬರ್ ಧಾರಣೆ ಬೆಳೆಗಾರನ ನಿರೀಕ್ಷಿತ ಧಾರಣೆಯಲ್ಲಿ ಸ್ಥಿರವಾಗಿದ್ದರೆ ಉಪ ಬೆಳೆಗಳ ಧಾರಣೆಯ ಏರಿಳಿತ ಬೆಳೆಗಾರರನ್ನು ಬಹುವಾಗಿ ಕಾಡದು. ಆದರೆ ಪ್ರಮುಖ ಬೆಳೆಗಳು ಕೈ ಕೊಟ್ಟಾಗ ಉಪ ಬೆಳೆಗಳು ಕೈ ಹಿಡಿದರೆ ಸಾಕು ಎಂಬತಾಗುತ್ತದೆ. ಆದರೆ ಈಗ ಪ್ರಮುಖ ಬೆಳೆ, ಉಪಬೆಳೆ ಎರಡೂ ಕೂಡ ಏರಿಕೆಯ ಸಂಕೇತ ಸೂಚಿಸಿರುವುದು ಕುತೂಹಲ ಮೂಡಿಸಿದೆ.
ಪ್ರಸ್ತುತ ಕ್ಯಾಂಪ್ಕೋ ಮಾರುಕಟ್ಟೆಗೆ ಹೋಲಿ ಸಿದರೆ ಹೊರ ಮಾರುಕಟ್ಟೆಯಲ್ಲಿ ಧಾರಣೆ ಹೆಚ್ಚಳ ಕಂಡಿದೆ. ಮಾ.27 ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 420 ರೂ., ಸಿಂಗಲ್ ಚೋಲ್ 465 ರೂ., ಡಬ್ಬಲ್ ಚೋಲ್ 495 ರೂ. ದಾಖಲಾಗಿತ್ತು. ಹೊರ ಮಾರು ಕಟ್ಟೆ ಯಲ್ಲಿ ಹೊಸ ಅಡಿಕೆಗೆ 425 ರೂ., ಸಿಂಗಲ್ ಚೋಲ್ 472 ರೂ., ಡಬ್ಬಲ್ ಚೋಲ್ 502 ರೂ.ಧಾರಣೆ ಇತ್ತು.
ರಬ್ಬರ್ ಧಾರಣೆ ಸತತವಾಗಿ ಏರಿಕೆ ಕಾಣುತ್ತಿದೆ. ಮಾ.26 ರಂದು ರಬ್ಬರ್ ಗ್ರೇಡ್‌ಗೆ 201 ರೂ., ರಬ್ಬರ್ ಸ್ಕಾÂÅಪ್ 133 ರೂ. ಇತ್ತು. ಹತ್ತು ದಿನಗಳ ಹಿಂದೆ 192 ರೂ., ಹಾಗೂ 127 ರೂ. ಇದ್ದಿತ್ತು. ಕರಾವಳಿ ಭಾಗದ ಪ್ರಮುಖ ಬೆಳೆಯಾದ ತೆಂಗಿನ ಕಾಯಿ ಧಾರಣೆಯು ಭರ್ಜರಿ ಏರಿಕೆ ಕಂಡಿದೆ. ಮಾ.22 ರಂದು ಕೆ.ಜಿ.ಗೆ 55 ಇದ್ದ ಧಾರಣೆ ಮಾ.26 ರಂದು 61 ಕ್ಕೆ ಏರಿಕೆಯಾಗಿದೆ. ಕೊಬ್ಬರಿ ಧಾರಣೆಯು 150 ರಿಂದ 175 ರೂ.ಗೆ ಹೆಚ್ಚಳವಾಗಿದ್ದು ಒಂದೇ ದಿನದ ಅಂತರದಲ್ಲಿ ಕೆ.ಜಿ.ಗೆ 10 ರೂ.ನಷ್ಟು ಏರಿಕೆ ಕಂಡಿದೆ. ಕರಿಮೆಣಸು ಧಾರಣೆಯು ಏರಿಕೆಯ ಲಕ್ಷಣದಲ್ಲಿದೆ. ಕೆ.ಜಿ.ಗೆ 670 ರೂ. ನಲ್ಲಿದ್ದ ಧಾರಣೆ 680 ರೂ.ಗೆ ತಲುಪಿದ್ದು 700 ರೂ. ದಾಖಲಾಗುವ ಸಾಧ್ಯತೆ ಇದೆ.
ಧಾರಣೆ ಏರಿಕೆಯ ನಾಗಾಲೋಟ ಸೃಷ್ಟಿಸಿದ್ದ ಕೊಕ್ಕೋ ಧಾರಣೆ ಮಾತ್ರ ಕುಸಿದಿದೆ. ಮಾ.4 ರಂದು 215 ರೂ. ದಾಖಲಾಗಿದ್ದ ಹಸಿಕೊಕ್ಕೊ ಧಾರಣೆಯು ಮಾ.26 ರಂದು ಕೆ.ಜಿ.ಗೆ 150 ರೂ.ಗೆ ಇಳಿದಿದೆ. 65 ರೂ.ನಷ್ಟು ಕುಸಿತ ಆಗಿದೆ. 700 ರೂ. ತಲುಪಿದ್ದ ಒಣಕೊಕ್ಕೊ ಧಾರಣೆ 520 ಕ್ಕೆ ಇಳಿದಿದೆ.