ಸಮಗ್ರ ನ್ಯೂಸ್: ರಾಜ್ಯದ ಜನತೆಗೆ ಸರ್ಕಾರ ಮತ್ತೊಂದು ಬಿಗ್ ಶಾಕ್ ನೀಡಿದ್ದು, ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ಮತ್ತೆ 4 ರೂಪಾಯಿ ಏರಿಕೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ. ಪರಿಷ್ಕೃತ ನೂತನ ದರ ಎ.1ರಿಂದ ಜಾರಿಗೆ ಬರಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ 4 ರೂ ಏರಿಕೆಗೆ ಅನುಮೋದನೆ ದೊರಕಿದೆ.
ಈಗಾಗಲೇ ರಾಜ್ಯ ಸರ್ಕಾರ ಕೆಎಸ್‌ಆರ್ಟಿಸಿ ಮತ್ತು ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣದ ಟಿಕೆಟ್ ದರ ಏರಿಕೆ ಮಾಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಮತ್ತೆ ನಂದಿನಿ ಹಾಲಿನ ದರ 4 ರೂ ಏರಿಕೆ ಮಾಡಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ 5ರೂ. ಹೆಚ್ಚಳ ಮಾಡಬೇಕೆಂದು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಆದ್ರೆ ಇದೀಗ ಸಚಿವ ಸಂಪುಟ ನಾಲ್ಕು ರೂ ಏರಿಕೆಗೆ ಒಪ್ಪಿಗೆ ನೀಡಿದೆ. ಇದೇ ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿ ಬರಲಿದೆ.
ಹೈನುಗಾರಿಕೆಯ ಖರ್ಚು ವೆಚ್ಚಗಳ ಹೆಚ್ಚಳದಿಂದಾಗಿ ಹಾಲಿನ ಬೆಲೆ ಏರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಲಿನ ದರ ಹೆಚ್ಚಿಸದಿದ್ದರೆ ಜಿಲ್ಲಾ ಹಾಲು ಒಕ್ಕೂಟಗಳು ನಷ್ಟ ಅನುಭವಿಸಬೇಕಾಗುತ್ತದೆ. ಮತ್ತೊಂದೆಡೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಇತರೆ ಬ್ರ್ಯಾಂಡ್‌ಗಳ ಹಾಲಿನ ದರಕ್ಕೆ ಹೋಲಿಸಿದರೆ ರಾಜ್ಯದ ನಂದಿನಿ ಹಾಲಿನ ಬೆಲೆ ತುಂಬಾ ಕಡಿಮೆಯಿದೆ ಎಂದು ಪ್ರಸ್ತಾವದಲ್ಲಿ ಉಲ್ಲೇಸಲಾಗಿತ್ತು.
2023ರ ಆಗಸ್ಟ್‌ನಲ್ಲಿ ಹಾಲಿನ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲಾಗಿತ್ತು. ಆಗ ದರ ಪರಿಷ್ಕರಣೆಯೊಂದಿಗೆ ಹಾಲಿನ ದರವು ಲೀಟರ್‌ಗೆ 39 ರೂ.ನಿಂದ 42 ರೂ.ಗೆ ಏರಿಕೆಯಾಗಿತ್ತು. ಬಳಿಕ ರಾಜ್ಯದಲ್ಲಿ ಹಾಲು ಸಂಗ್ರಹಣೆಯು ದಾಖಲೆ ಪ್ರಮಾಣದಲ್ಲಿಏರಿಕೆಯಾಗಿದ್ದ ಕಾರಣಕ್ಕೆ ಕೆಎಂಎಫ್, 2024ರ ಜೂನ್ 26ರಿಂದ ಅನ್ವಯವಾಗುವಂತೆ ಹಾಲಿನ ದರ ಪರಿಷ್ಕರಣೆಯೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ಹಾಲು ವಿತರಿಸಲು ಆರಂಭಿಸಿತ್ತು. ನಂದಿನಿ ಬ್ರ್ಯಾಂಡ್‌ನ ಎಲ್ಲಾ ಮಾದರಿಯ ಹಾಲಿನ ದರದಲ್ಲಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿತ್ತು. ಗ್ರಾಹಕರು ಕೊಡುವ 2 ರೂ. ಹೆಚ್ಚುವರಿ ಹಣಕ್ಕೆ ಪ್ರತಿಯಾಗಿ 50 ಎಂಎಲ್ ಹೆಚ್ಚುವರಿ ಹಾಲು ನೀಡಲಾಗುತ್ತಿದೆ.