ಸಮಗ್ರ ನ್ಯೂಸ್: ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎಪ್ರಿಲ್ 10 ರಿಂದ ಪ್ರಾರಂಭಗೊಳ್ಳಲಿದೆ. 10 ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯಲ್ಲಿ ಈ ಹಿಂದೆಯಂತೆ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿದೆ. ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡುವಂತೆ ಹಿಂದೂಪರ ಸಂಘಟನೆಗಳು ಈ ಹಿಂದೆ ಮಾಡಿದ ಮನವಿಯಂತೆ ಈ ಬಾರಿಯೂ ಇದೇ ವ್ಯವಸ್ಥೆಯನ್ನು ಮುಂದುವರಿಸಲು ಕ್ಷೇತ್ರದ ವ್ಯವಸ್ಥಾಪನ ಸಮಿತಿ ನಿರ್ಧರಿಸಿದೆ.
ಎಪ್ರಿಲ್ 10 ರಿಂದ 20 ರ ತನಕ ಈ ಜಾತ್ರೆ ನಡೆಯಲಿದ್ದು, ಈ ಬಾರಿಯೂ ಅನ್ಯಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲು ನಿರ್ಧರಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎನ್ನುವ ಮನವಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಅನ್ಯಮತೀಯರ ವ್ಯಾಪಾರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ನಿರ್ಧಾರವನ್ನು ಆ ಸಂದರ್ಭದಲ್ಲಿ ಕಾಂಗ್ರೇಸ್ ವಿರೋಧಿಸಿತ್ತು. ಹಿಂದೂಪರ ಸಂಘಟನೆಗಳ ಈ ಮನವಿಗೆ ಸ್ಪಂದಿಸಬಾರದು ಎನ್ನುವ ಒತ್ತಾಯಗಳ ನಡುವೆಯೇ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅನ್ಯಮತೀಯರ ವ್ಯಾಪಾರದ ನಿಶೇಧವನ್ನು ಈ ಬಾರಿಯೂ ಮುಂದುವರಿಸಿದ್ದಾರೆ.
ಈ ಜಾತ್ರೆಯ ದಿನಗಳಲ್ಲಿ ಕ್ಷೇತ್ರದಲ್ಲಿ ಅತೀ ಹೆಚ್ಚು ಜನ ಸೇರುವ ಕಾರಣಕ್ಕೆ ಅತೀ ಹೆಚ್ಚಿನ ವ್ಯಾಪಾರ- ವ್ಯವಹಾರದ ಕೇಂದ್ರವಾಗಿಯೂ ಬದಲಾಗುತ್ತದೆ. ಏಲಂ ಪ್ರಕ್ರಿಯೆಯ ಮೂಲಕ ಅಂಗಡಿಗಳ ಏಲಂ ಪ್ರಕ್ರಿಯೆಗಳು ಇಲ್ಲಿ ನಡೆಯುತ್ತಿದ್ದು, ಈ ಬಾರಿ ಏಲಂ ಪ್ರಕ್ರಿಯೆಯಲ್ಲೂ ಹಲವು ಮಾರ್ಪಾಡುಗಳನ್ನು ತರಲು ಉದ್ಧೇಶಿಸಲಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಈ ನಿರ್ಧಾರವನ್ನು ಹಿಂದೂಪರ ಸಂಘಟನೆಗಳು ಸ್ಚಾಗತಿಸಿವೆ. ಆದರೆ ವ್ಯವಸ್ಥಾಪನಾ ಸಮಿತಿ ಮತ್ತು ಶಾಸಕರ ಈ ನಡೆಗೆ ಅಸಮಾಧಾನವೂ ಕೇಳಿಬರಲಾರಂಭಿಸಿದೆ.