ಸಮಗ್ರ ನ್ಯೂಸ್: ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತಂದಿದೆ. ಇವತ್ತಿನ ರಾಜಕಾರಣಿಗಳನ್ನು ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ. ನಾನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತಂದಿದೆ. ಸದನದಲ್ಲಿ ನಡೆದ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ನಾನು ವಿಫಲನಾಗಿದ್ದೇನೆ. ಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಭಾವನೆ ನನ್ನಲ್ಲಿ ಬಂದಿದೆ ಎಂದು ಹೇಳಿದರು.
ಸಭಾಪತಿಗೆ ಹೇಳುವವರು- ಕೇಳುವವರು ಯಾರೂ ಇಲ್ಲ. ದಿನನಿತ್ಯ ಚರ್ಚೆ ನಡೆಯುತ್ತಿವೆ. ಅದನ್ನು ನಡೆಸುವ ಶಕ್ತಿ ಇಲ್ಲ ಅನ್ನಿಸುತ್ತಿದೆ. ಇಂಪಾರ್ಟೆಂಟ್ ಬಿಲ್ಲು ಇರುತ್ತವೆ. ಆದರೆ ಅದೇ ಸಂದರ್ಭದಲ್ಲಿ ಸದನದಲ್ಲಿ ಧಿಕ್ಕಾರ ಕೂಗುತ್ತಾರೆ. ವಿಧಾನಪರಿಷತ್‌ನಲ್ಲಿಯೇ ಪ್ಲೇಯ ಕಾರ್ಡ್‌ಗಳನ್ನು ತೆಗೆದುಕೊಂಡು ಬರುತ್ತಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಸದನ ನಡೆಸುವುದಕ್ಕೆ ನನಗೆ ಯೋಗ್ಯತೆ ಇಲ್ಲ. ಮೊನ್ನೆ ನಾನು 17 ನಿಮಿಷ ಸುಮ್ಮನೆ ಕುತ್ತಿದೆ. ಇದರಿಂದ ನಾನು ಸದನದಲ್ಲಿ ಇರಬಾರದು ಅಂದ ತೀರ್ಮಾನ ಮಾಡಿದ್ದೇನೆ. 45 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಸದನದಲ್ಲಿ ಯಾರೂ ಗೌರವ ಕೊಡುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮೇಲ್ಮನೆ ಎಂದರೆನೇ ಚಿಂತಕರ ಚಾವಡಿ ಎನ್ನುವ ಮಾತಿದೆ. ನಮ್ಮ ರಾಜ್ಯದ ಮೇಲ್ಮನೆ (ವಿಧಾನ ಪರಿಷತ್) ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ಮೇಲ್ಮನೆಗೆ ಸಭಾಪತಿ ಆಗುವುದು ಎನ್ನುವುದೇ ಗೌರವದ ವಿಷಯವಾಗಿದೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ಗೌರವ ಸಿಗದೆ ಇದ್ದರೆ ಹೇಗೆ. ಇದರಿಂದ ಏನು ಉಪಯೋಗ ಅಂತ ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನೂ ಮಾತನಾಡಿದ ಅವರು ಮನಸ್ಸಿನಲ್ಲಿ ಇರುವುದನ್ನು ನಾನು ಹೇಳಿದ್ದೇನೆ. ದುಡುಕಿ ಯಾವ ನಿರ್ಧಾರವನ್ನು ನಾನು ತೆಗೆದುಕೊಳ್ಳಲ್ಲ. ನನ್ನ ಸ್ನೇಹಿತರು, ಆಪ್ತರ ಜೊತೆ ಸೇರಿ ತೀರ್ಮಾನ ಮಾಡುತ್ತೇನೆ. ಅವರು ಏನು ಮಾರ್ಗದರ್ಶನ ನೀಡುತ್ತಾರೆ ಅದರಂತೆ ಮುಂದುವರೆಯುತ್ತೇನೆ ಎಂದು ಹೇಳಿದ್ದರು.