ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.21 ರ ಶುಕ್ರವಾರ ಮೊದಲ ದಿನದ ಎಸೆಸೆಲ್ಸಿ ಪರೀಕ್ಷೆ ಸಾಂಗವಾಗಿ ನಡೆದಿದೆ.
ಜಿಲ್ಲೆಯಲ್ಲಿ ಒಟ್ಟು 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಪ್ರಥಮ ಭಾಷೆ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 28925 ವಿದ್ಯಾರ್ಥಿಗಳ ಪೈಕಿ 28728 ಮಂದಿ ಪರೀಕ್ಷೆ ಬರೆದಿದ್ದಾರೆ. ಹಾಗೂ 229 ಮಂದಿ ವಿವಿಧ ಕಾರಣಗಳಿಂದ ಗೈರು ಹಾಜರಾಗಿದ್ದಾರೆ.
ಕನ್ನಡ ಭಾಷಾ ಪರೀಕ್ಷೆಗೆ 202, ಇಂಗ್ಲಿಷ್ ಗೆ 23 ಹಾಗೂ ಸಂಸ್ಕೃತ ಭಾಷಾ ಪರೀಕ್ಷೆಗೆ 4 ಮಂದಿ ಗೈರಾಗಿದ್ದಾರೆ. ಬಂಟ್ವಾಳದಲ್ಲಿ ಒಟ್ಟು ನೋಂದಾಯಿತ 5879 ಅಭ್ಯರ್ಥಿಗಳಲ್ಲಿ 5827, ಬೆಳ್ತಂಗಡಿಯಲ್ಲಿ 4074ರಲ್ಲಿ 4050, ಮಂಗಳೂರು ಉತ್ತರದಲ್ಲಿ 5301ರಲ್ಲಿ 5269, ಮಂಗಳೂರು ದಕ್ಷಿಣದಲ್ಲಿ 5075ರಲ್ಲಿ 5038, ಮೂಡುಬಿದಿರೆಯಲ್ಲಿ 1973ರಲ್ಲಿ 1946, ಪುತ್ತೂರಿನಲ್ಲಿ 4716ರಲ್ಲಿ 4695, ಸುಳ್ಯದಲ್ಲಿ 1939ರಲ್ಲಿ 1903 ಮಂದಿ ಪರೀಕ್ಷೆ ಬರೆದಿದ್ದಾರೆ.
ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಪೂರ್ಣಮಟ್ಟದಲ್ಲಿ ಈ ಪರೀಕ್ಷೆಯಲ್ಲಿ ಜಾರಿ ಮಾಡಲಾಗಿತ್ತು. ಬಿಸಿಲಿನ ವಾತಾವರಣ ಅಧಿಕವಿದ್ದ ಕಾರಣದಿಂದ ಮಕ್ಕಳಿಗೆ ಸೂಕ್ತ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಆರೋಗ್ಯ ಇಲಾಖೆ ಕೂಡ ಸಹಕರಿಸಿದ್ದು, ಪೊಲೀಸ್ ಇಲಾಖೆ ಬಂದೋಬಸ್ತ್ ನೋಡಿಕೊಂಡಿತ್ತು.
ಉಡುಪಿ ಜಿಲ್ಲೆಯಲ್ಲಿ 65 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಮೊದಲ ದಿನ ದುಷ್ಕರ್ಮಿಗಳು ಕಂಬದಕೋಣೆಯಲ್ಲಿ ಸಿಸಿ ಕೆಮರಾ ಹಾಳು ಮಾಡಿದ ಘಟನೆ ಹೊರತುಪಡಿಸಿ, ಉಳಿದೆಡೆ ಸುಸೂತ್ರವಾಗಿ ನಡೆದಿದೆ.
ಪ್ರಥಮ ಭಾಷೆ ಪರೀಕ್ಷೆಗೆ ಜಿಲ್ಲೆಯಿಂದ ನೋಂದಣಿ ಮಾಡಿಕೊಂಡಿದ್ದ 13895 ವಿದ್ಯಾರ್ಥಿಗಳ ಪೈಕಿ 13830 ಮಂದಿ ಪರೀಕ್ಷೆ ಬರೆದಿದ್ದು 65 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಯಾವುದೇ ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷಾ ಅಕ್ರಮ ಅಥವಾ ಡಿಬಾರ್ ದಾಖಲಾಗಿಲ್ಲ.
ವಿದ್ಯಾರ್ಥಿಗಳು ಒಂದೂವರೆ ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಪರೀಕ್ಷ ಕೇಂದ್ರದಲ್ಲಿ ವಿಶೇಷ ತಪಾಸಣೆಯೂ ನಡೆದಿದೆ. ಕೊಠಡಿಯೊಳಗೆ ಪ್ರವೇಶಕ್ಕೂ ಮೊದಲು ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಅಂತಿಮ ಹಂತದ ಚರ್ಚೆ ನಡೆಸುತ್ತಿದ್ದ ಸನ್ನಿವೇಶಗಳು ಎಲ್ಲಡೆಗೆ ಕಂಡು ಬಂದಿದೆ. ಪರೀಕ್ಷೆ ಬರೆದು ವಿದ್ಯಾರ್ಥಿಗಳು ಖುಷಯಿಂದಲೇ ಹೊರಗೆ ಬಂದಿದ್ದಾರೆ. ಪ್ರಥಮ ಭಾಷಾ ವಿಷಯದ ಪರೀಕ್ಷೆ ಅಷ್ಟೇನೂ ಕ್ಲಿಷ್ಟ ಇರಲಿಲ್ಲ. ಮುಂದಿನ ಪರೀಕ್ಷೆಗಳು ಹೀಗೆ ಇದ್ದರೆ ಸಾಕು ಎಂಬ ಅಭಿಪ್ರಾಯ ಹೊರ ಹಾಕಿದ್ದಾರೆ. ಅಲ್ಲದೆ, ತಮ್ಮ ಸ್ನೇಹಿತರೊಂದಿಗೆ ನೀನು ಯಾವುದಕ್ಕೆ ಯಾವ ಉತ್ತರ ಬರೆದಿರೆ ಎಂಬುತ್ಯಾದಿ ಪ್ರಶ್ನೆ ಮಾಡುತ್ತಲೇ ಮನೆಯ ಕಡೆಗೆ ಹೆಜ್ಜೆ ಹಾಕಿದ್ದಾರೆ.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಅವರು ಉಡುಪಿಯ ಬೋರ್ಡ್‌ಹೈಸ್ಕೂಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆಯ ವ್ಯವಸ್ಥೆಯನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಜಿಲ್ಲೆಯ 51 ಕೇಂದ್ರದಲ್ಲಿ ಪರೀಕ್ಷೆ ನಡೆದಿದ್ದು, ಎಲ್ಲ ಕೊಠಡಿಗಳ ಸಿಸಿಕೆಮರಾದ ವೆಬ್‌ಕಾಸ್ಟಿಂಗ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಲಾಗಿದೆ. ಪರೀಕ್ಷ ವೇಳೆಯಲ್ಲಿ ಎಲ್ಲಿಯೂ ಯಾವುದೇ ರೀತಿಯ ಅನುಮಾನಾಸ್ಪದ ಘಟನೆ ನಡೆದಿಲ್ಲ ಎಂದು ಡಿಡಿಪಿಐ ಕೆ. ಗಣಪತಿ ತಿಳಿಸಿದ್ದಾರೆ.