ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಬೃಹತ್ ಬಂದ್‌ಗೆ ಕರೆ ನೀಡಲಾಗಿದೆ. ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ, ರಾಜ್ಯದ ಹಲವು ಭಾಗಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಂದ್‌ನ ಮುಖ್ಯ ಉದ್ದೇಶ ಮಹಾರಾಷ್ಟ್ರದ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿದೆ. ಹಾಗೂ ಕರ್ನಾಟಕ ಗಡಿಭಾಗದ ಜನರ ಹಕ್ಕುಗಳನ್ನು ಕಾಪಾಡಲು ಸರ್ಕಾರದ ಗಮನ ಸೆಳೆಯುವುದಾಗಿದೆ.
ನಾಳೆ ಬೆಳಗ್ಗೆ 6 ಗಂಟೆಗೆ ಶುರುವಾಗುಬ ಬಂದ್, ಸಂಜೆ 6 ಗಂಟೆಯವರೆಗೂ ಇರಲಿದೆ. ಈ ಬಂದ್‌ನಲ್ಲಿ ಕನ್ನಡ ಪರ ಸಂಘಟನೆಗಳು, ರಾಜಕೀಯ ಪಕ್ಷಗಳು, ಮತ್ತು ವಿದ್ಯಾರ್ಥಿ ಸಂಘಟನೆಗಳು ಪಾಲ್ಗೊಳ್ಳಲಿವೆ. ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ, ಮತ್ತು ಕರ್ನಾಟಕ ಸರ್ಕಾರದ ನಿರ್ಲಕ್ಷ್ಯಕ್ಕೆ ವಿರೋಧ ಈ ಬಂದ್ ನಡೆಸಲಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವ್ಯಾಪಕ ಪ್ರತಿಭಟನೆಗಳು ನಡೆಯುವ ನಿರೀಕ್ಷೆಯಿದೆ. ಇದರಿಂದಾಗಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ತಮ್ಮ ದಿನಚರಿಯನ್ನು ಬದಲಾಯಿಸಿಕೊಳ್ಳಬೇಕಾಗಬಹುದು.
ಇದು ಸತತ 12 ಗಂಟೆಗಳ ಕಾಲ ಸಕ್ರಿಯವಾಗಿರಲಿರುವ ಬಂದ್ ಆಗಿದ್ದು, ಇದರ ಪರಿಣಾಮವಾಗಿ ಸಾರ್ವಜನಿಕ ಸಾರಿಗೆ, ವ್ಯಾಪಾರ ವಹಿವಾಟು, ಶಿಕ್ಷಣ ಸಂಸ್ಥೆಗಳು, ಮತ್ತು ಕೆಲವು ಖಾಸಗಿ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ನಾಳೆ ಏನಿರಲ್ಲ..?
- ಬಸ್ ಮತ್ತು ಸಾರ್ವಜನಿಕ ಸಾರಿಗೆ ಸೇವೆಗಳು:
ರಾಜ್ಯದಲ್ಲಿ ಸಾರ್ವಜನಿಕ ಸೇವೆಗಳು ನಾಳೆ ಬಂದ್ ಸಮಯದಲ್ಲಿ ಸ್ಥಗಿತವಾಗಿರಲಿವೆ. ಕೆಎಸ್‌ಆರ್‍ಟಿಸಿ ಮತ್ತು ಬಿಎಂಟಿಸಿ ಸಂಪೂರ್ಣವಾಗಿ ನಿಂತುಹೋಗುವ ಸಾಧ್ಯತೆ ಇದೆ. ಹಾಗೂ ಬೆಂಗಳೂರಿನ ಡಲ್ಲಾಸ್, ಶಿವಾಜಿನಗರ, ಮೆಜೆಸ್ಟಿಕ್ ಮುಂತಾದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಸಂಚಾರದ ವ್ಯತ್ಯಯ ಉಂಟಾಗಬಹುದು. ಇದರ ಜೊತೆಗೆ ಖಾಸಗಿ ಸಾರಿಗೆಗಳಿಗೂ ಬಂದ್‌ನ ಬಿಸಿ ತಟ್ಟಬಹುದು. ಅಂದರೆ ವಿಶೇಷವಾಗಿ ಆಟೋ ಮತ್ತು ಕ್ಯಾಬ್ ಸೇವೆಗಳು ಸಹ ಭಾಗಶಃ ಬಂದ್‌ಗೆ ಬೆಂಬಲ ನೀಡಬಹುದು. ಹಾಗಾಗಿ ಈ ಸೇವೆಗಳು ಕಡಿಮೆಯಾಗಬಹುದು. ಹೀಗಾಗಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ಮುಂಚಿತವಾಗಿ ಪ್ಲಾನ್ ಮಾಡಿಕೊಳ್ಳುವುದು ಉತ್ತಮ. - ಶಾಲೆಗಳು ಮತ್ತು ಕಾಲೇಜುಗಳು:
ನಾಳೆ ಬಹುತೇಕ ಹೆಚ್ಚಿನ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಿರಲಿವೆ. ಪ್ರಮುಖವಾಗಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಮತ್ತು ಬೆಳಗಾವಿ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳು ಬಂದ್ ಆಗಲಿವೆ. ಹೀಗಾಗಿ ಕೆಲವು ಶಾಲೆ ಮತ್ತು ಕಾಲೇಜುಗಳ ಪರೀಕ್ಷೆಗಳು ಮುಂದೂಡಬಹುದು ಅಥವಾ ಮರುನಿಗದಿಯಾಗಬಹುದು. - ಅಂಗಡಿಗಳು ಮತ್ತು ವ್ಯಾಪಾರ ವಹಿವಾಟು:
ಇನ್ನು ಬೆಂಗಳೂರಿನಲ್ಲಿರುವ ವ್ಯಾಪಾರ ವಹಿವಾಟುಗಳಿಗೆ ಈ ಬಂದ್‌ನ ಬಿಸಿ ಹೆಚ್ಚಾಗಿ ತಟ್ಟಲಿದೆ. ಅಂದರೆ ಚಿಕ್ಕಪೇಟೆ, ಕೆಆರ್ ಮಾರುಕಟ್ಟೆ, ಗಾಂಧಿ ಬಜಾರ್, ಮಲ್ಲೇಶ್ವರಂ, ಜಯನಗರ, ರಾಜಾಜಿನಗರ ಮುಂತಾದ ವ್ಯಾಪಾರ ಪ್ರದೇಶಗಳಲ್ಲಿ ಅಂಗಡಿಗಳು ಮುಚ್ಚುವ ಸಾಧ್ಯತೆ ಇದೆ. ಹಾಗೆಯೇ ಮಾರುಕಟ್ಟೆಗಳಲ್ಲಿ ದಿನಸಿ ಮತ್ತು ತರಕಾರಿ ಅಂಗಡಿಗಳು ಬೆಳಗ್ಗೆ ಒಂದಷ್ಟು ತೆರೆದಿರುವ ಸಾಧ್ಯತೆ ಇದ್ದರೂ, ಮಧ್ಯಾಹ್ನದ ನಂತರವೂ ಎಲ್ಲ ಮುಚ್ಚಬಹುದು. ಜೊತೆಗೆ ಕಾಂಪ್ಲೆಕ್ಸ್, ಶಾಪಿಂಗ್ ಮಾಲ್‌ಗಳು, ಎಲೆಕ್ಟ್ರಾನಿಕ್ ಮತ್ತು ವಸ್ತ್ರದ ಅಂಗಡಿಗಳು ಮುಚ್ಚುವ ಸಾಧ್ಯತೆಯೂ ಇದೆ. - ಚಿತ್ರಮಂದಿರಗಳು ಬಂದ್:
ನಾಳೆ ಕರ್ನಾಟಕ ಬಂದ್ ಇರುವ ಕಾರಣ ಮಾಲ್ಸ್, ಚಿತ್ರಮಂದಿರಗಳು ಮತ್ತು ರೆಸ್ಟೋರೆಂಟ್‌ಗಳು ಬಂದ್ ಆಗಲೂಬಹುದು. ಅಥವಾ ಬೆಳಗ್ಗೆ ಮಾತ್ರ ತೆಗೆದಿರಬಹುದು. ಬಹುತೇಕ ಹೋಟೆಲ್‌ಗಳು ತೆರೆದಿರುವ ಸಾಧ್ಯತೆಯೂ ಇದೆ. - ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ:
ಇನ್ನು ನಾಳೆ ಸಾಮಾನ್ಯವಾಗಿ ಮಾರ್ಚ್ ತಿಂಗಳಿನ ನಾಲ್ಕನೇ ಶನಿವಾರ. ಹೀಗಾಗಿ ಬ್ಯಾಂಕುಗಳು ಸಾಮಾನ್ಯವಾಗಿ ಮುಚ್ಚಿರಲಿವೆ. ಸರ್ಕಾರಿ ಕಚೇರಿಗಗಳು ತೆರೆದಿದ್ದರೂ ಸಾರಿಗೆ ಅಡಚಣೆಯಿಂದಾಗಿ ಹಾಜರಾತಿ ಕಡಿಮೆಯಾಗಬಹುದು. ಈ ಬಂದ್‌ನ ಬಿಸಿ ಸರ್ಕಾರಿ ಕೆಲಸಗಳ ಮೇಲೂ ಮುಟ್ಟಬಹುದು.
ನಾಳೆ ಏನೆಲ್ಲಾ ಇರಲಿದೆ:
- ನಮ್ಮ ಮೆಟ್ರೋ:
ನಾಳೆ ಕರ್ನಾಟಕ ಬಂದ್ ಇದ್ದರೂ ಮೆಟ್ರೋ ಸೇವೆ ಮಾತ್ರ ಎಂದಿನಂತೆ ಇರಲಿದೆ. ನಾಳೆ ಇತರೆ ಸಾರಿಗೆ ವ್ಯವಸ್ಥೆ ಇರದ ಕಾರಣ ಜನರು ಹೆಚ್ಚಾಗಿ ನಾಳೆ ಮೆಟ್ರೋ ಮೇಲೆ ಅವಲಂಬಿತರಾಗಬಹುದು. ಹೀಗಾಗಿ ಮೆಟ್ರೋ ಸ್ಟೇಷನ್‌ಗಳಲ್ಲಿ ನಾಳೆ ಸಾಮಾನ್ಯವಾಗಿ ಹೆಚ್ಚಿನ ಜನರು ಇರುವ ಸಾಧ್ಯತೆ ಇದೆ. ಮೆಟ್ರೋ ನಿಲ್ದಾಣಗಳ ಬಳಿ ಆಟೋ ಮತ್ತು ಕ್ಯಾಬ್ ಸೇವೆಗಳು ಸೀಮಿತವಾಗಿರಬಹುದು. - ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳು:
ನಾಳೆಯ ಕರ್ನಾಟಕ ಬಂದ್ ಯಾವುದೇ ಆಸ್ಪತ್ರೆಗಳು, ಮೆಡಿಕಲ್ ಅಂಗಡಿಗಳು ಮತ್ತು ತುರ್ತು ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಅಂದರೆ ಇವೆಲ್ಲವೂ ನಾಳೆ ಲಭ್ಯವಿರುತ್ತವೆ. ಹೀಗಾಗಿ ರೋಗಿಗಳು ಆಸ್ಪತ್ರೆಗೆ ಹೋಗಲು ಖಾಸಗಿ ವಾಹನ ಅಥವಾ ಮೆಟ್ರೋ ಬಳಸುವುದು ಉತ್ತಮ. - ರೈಲು ಮತ್ತು ವಿಮಾನಯಾನ ಸೇವೆಗಳು:
ಇನ್ನು ನಾಳೆ ಕರ್ನಾಟಕ ಬಂದ್ ಇದ್ದರೂ ರೈಲು ಸೇವೆಯ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ. ಎಂದಿನಂತೆ ರೈಲುಗಳು ಯಥಾಸ್ಥಿತಿಯಲ್ಲಿ ಸಂಚರಿಸಲಿವೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾವುದೇ ವ್ಯತ್ಯಯವಿಲ್ಲ. ಆದರೆ, ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಗೆ ಸಾರ್ವಜನಿಕ ಸಾರಿಗೆ ಸೀಮಿತವಾಗಿರುವುದರಿಂದ, ಪ್ರಯಾಣಿಕರು ಮುಂಚಿತವಾಗಿ ಯೋಜಿಸಿಕೊಳ್ಳುವುದು ಉತ್ತಮ. - ಅಗತ್ಯ ಸೇವೆಗಳು:
ಇನ್ನು ನಾಳೆ ಅಗತ್ಯ ಸೇವೆಗಳ ಮೇಲೂ ಕರ್ನಾಟಕ ಬಂದ್ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಎಂದಿನಂತೆ ಹಾಲು, ನೀರು, ಎಲ್‌ಪಿಜಿ ಸಿಲಿಂಡರ್ ಸರಬರಾಜು ನಡೆಯಲಿದೆ. ಹಾಗೂ ನಾಳೆ ಪೆಟ್ರೋಲ್ ಬಂಕ್‌ಗಳು ಕೂಡ ತೆರೆದಿರಬಹುದು. ಆದರೆ ಕೆಲವು ಕಡೆ ಮಾತ್ರ ಮುಚ್ಚಿರುವ ಸಾಧ್ಯತೆ ಇದೆ. ಇನ್ನು ತುರ್ತು ಸೇವೆಗಳಾದ ಅಗ್ನಿಶಾಮಕ, ಪೊಲೀಸರು, ವೈದ್ಯಕೀಯ ಸಿಬ್ಬಂದಿ ಕೂಡ ಎಂದಿನಂತೆ ಕಾರ್ಯನಿರ್ವಹಿಸಲಿದ್ದಾರೆ. - ಆನ್‌ಲೈನ್ ವಿತರಣಾ ಸೇವೆಗಳು:
ಇನ್ನು ಬೆಂಗಳೂರಿನಲ್ಲಿ Zomato, Swiggy, Blinkit, Zepto ಸೇರಿ ಮುಂತಾದ ಆನ್‌ಲೈನ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಆದರೆ ಪಾರ್ಸಲ್ ಡೆಲಿವರಿ ನೌಕರರು ವಾಹನ ಸಂಚಾರದ ಸಮಸ್ಯೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ದೀರ್ಘ ವಿಳಂಬವಾಗಬಹುದು.
ಅಂದಹಾಗೆ ನಾಳೆ ಕರ್ನಾಟಕ ಬಂದ್ ಇರುವುದರಿಂದ ಸಾರ್ವಜನಿಕ ಸಾರಿಗೆ ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು, ಜನರು ಆದಷ್ಟು ಮುಂಚಿತವಾಗಿ ಅಗತ್ಯ ವಸ್ತುಗಳನ್ನು ಬೆಳಗ್ಗೆ ಖರೀದಿಸಿಕೊಳ್ಳುವುದು ಉತ್ತಮ. ಹಾಗೆಯೇ ಅಗತ್ಯ ಸೇವೆಗಳಾದ ಔಷಧಿ, ಆಹಾರ, ಮತ್ತು ದಿನಸಿ ವಸ್ತುಗಳು ಮುನ್ಸೂಚನೆಗಾಗಿ ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ.