ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಹಲ್ಲೆಯ ದೃಶ್ಯಗಳನ್ನು ಸೆರೆಹಿಡಿಯಾಗಿದ್ದು, ಇದೀಗ ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಹೊಸಕೋಟೆಯಲ್ಲಿ ಲತಾ ಯಾದವ್ ಎಂಬ ಮಹಿಳೆಯ ಮನೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅವಮಾನಿಸಲಾಗಿದೆ. ಚಂದನ, ಭರತ್, ಶಿವು ಮತ್ತು ಇತರರು ಸೇರಿದಂತೆ ಆಕೆಯ ಕುಟುಂಬ ಸದಸ್ಯರು ಹಲ್ಲೆಯಲ್ಲಿ ಭಾಗಿಯಾಗಿರುವುದು ವಿಡಿಯೋದಲ್ಲಿ ಕಾಣಸಿಗುತ್ತದೆ. ವ್ಯಕ್ತಿಗೆ ದೈಹಿಕ ಹಿಂಸೆ, ಅವಮಾನ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ವೀಡಿಯೋ ನೋಡಿದರೆ ಇವರಿಗೆ ಮಾನವೀಯತೆ ಸತ್ತೋಗಿದೆ ಎಂದೆನಿಸುತ್ತಿದೆ. ವಿಡಿಯೋದಲ್ಲಿ ಪುರುಷರಿಬ್ಬರು ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿದ್ದರೆ ಮಹಿಳೆ ವಿಡಿಯೋ ಮಾಡುತ್ತಿದ್ದಾರೆ. ಅಲ್ಲದೆ ವ್ಯಕ್ತಿಗೆ ಕೀಳುಮಟ್ಟದ ಪ್ರಶ್ನೆಗಳನ್ನು ಕೇಳುತ್ತಾ ಅಪಹಾಸ್ಯ ಮಾಡಿ ನಿರ್ದಯವಾಗಿ ಥಳಿಸಿದ್ದಾರೆ. ವ್ಯಕ್ತಿ ಅಸಹಾಯಕವಾಗಿ ಕುಳಿತ್ತಿದ್ದಾಗ ದುಷ್ಕರ್ಮಿಗಳು ಆತನಿಗೆ ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಆತ ಬಿಟ್ಟುಬಿಡಿ ಎಂದು ಬೇಡಿಕೊಂಡರು ದಾಳಿಕೋರರು ಹಲ್ಲೆಯನ್ನು ಮುಂದುವರೆಸಿದ್ದಾರೆ. ಯಾವ ಕಾರಣಕ್ಕಾಗಿ ಈ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.