ಸಮಗ್ರ ನ್ಯೂಸ್: ಕಾಂಗ್ರೆಸ್ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ತಮ್ಮ ಡೈಲಾಗ್‌ಗಳಿಂದಲೇ ಫೇಮಸ್ ಆದವರು. ಆದರೆ ಇದೀಗ ಸರ್ಕಾರದ ವಿಚಾರವಾಗಿ ಏಕವಚನದಲ್ಲಿ ಅವಾಜ್ ಹಾಕಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ನಿನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು ಇದೇ ವೇದಿಕೆಯಲ್ಲಿ ಬಿಜೆಪಿ ಸಂಸದ ಪಿಸಿ ಮೋಹನ್ ಕೂಡ ಇದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಸರ್ಕಾರಿ ಕಾರ್ಯಕ್ರಮವು ರಾಜಕೀಯ ಕಿತ್ತಾಟದ ವೇದಿಕೆಯಾಗಿ ಬದಲಾಗಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇಬ್ಬರೂ ಭಾಗಿಯಾಗಿದ್ದರು. ಈ ವೇಳೆ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡ ಪ್ರದೀಪ್ ಈಶ್ವರ್ ಅವರು ವೇದಿಕೆಯಲ್ಲೇ ಬಿಜೆಪಿ ಕಾರ್ಯಕರ್ತರಿಗೆ ಏಕವಚನದಲ್ಲಿ ಅವಾಜ್ ಹಾಕಿದ್ದಾರೆ.
ಇದೇನು ಬಿಜೆಪಿ ಕಾರ್ಯಕ್ರಮ ಅನ್ಕೊಂಡಿದ್ದೀರಾ? ಬಿಜೆಪಿ ಗುಣಗಾನ ಮಾಡೋರು ಬಾಯಿ ಮುಚ್ಕೊಂಡು ಇರ್ಬೇಕು. ರಾಜ್ಯದಲ್ಲಿರೋದು ಸಿದ್ದರಾಮಯ್ಯ ಸರ್ಕಾರ, ನಿಮ್ಮಪ್ಪನ್ ಸರ್ಕಾರ ಅಲ್ಲ, ಏಯ್…ಇದು ಸಿದ್ದರಾಮಯ್ಯ ಪ್ರೋಂಗ್ರಾಂ, ನಿಮ್ಮಪ್ಪನ ಪ್ರೋಂಗ್ರಾಂ ಅಲ್ಲ, ಸುಮ್ನೆ ಕೂತ್ಕೋಬೇಕು, ಇಲ್ಲ ಗೆಟ್ ಲಾಸ್ಟ್” ಎಂದು ಅವಾಜ್ ಹಾಕಿದ್ದಾರೆ.
ಇದೇ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕೂಡ ಮಧ್ಯಪ್ರವೇಶಿಸಿದ್ದಾರೆ. “ಪ್ರದೀಪ್ ಈಶ್ವರ್ ಅವ್ರೇ, ಒಂದು ನಿಮಿಷ ಇಲ್ಲಿ ಕೇಳಿ. ನಿಮಗೇ ತುಂಬಾ ಉತ್ಸಾಹವಿದೆ ಒಳ್ಳೇದು. ಆದ್ರೆ ನೀವು ಇಲ್ಲಿ ಬಂದು ಇದು ಸಿದ್ದರಾಮಯ್ಯನ ಪ್ರೋಂಗ್ರಾಂ ಅಂದ್ರೆ, ನಾನು ಬಿಜೆಪಿ ಸಂಸದನಾದ ನಾನು ಇಲ್ಲಿ ಇರಬೇಕಾ, ಬೇಡ್ವಾ ಹೇಳ್ರೀ?” ಎಂದು ಜೋರುದನಿಯಲ್ಲೇ ಕೇಳಿದ್ದಾರೆ.
ಕಾರ್ಯಕ್ರಮದ ಆಯೋಜಕರು ಕೂಡ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಸುಮ್ಮನಾಗದ ಪ್ರದೀಪ್ ಈಶ್ವರ್ ಅವರು ನೀವು ನಿಮ್ಮ ಪಕ್ಷವನ್ನು ಗುಣಗಾನ ಮಾಡಿದರೆ, ನಾವು ನಮ್ಮ ಪಕ್ಷವನ್ನು ಗುಣಗಾನ ಮಾಡಬೇಕಾಗುತ್ತೆ ಎಂದಿದ್ದಾರೆ. ಒಟ್ಟಾರೆಯಾಗಿ ಕರ್ನಾಟಕ ಸರ್ಕಾರ ಆಯೋಜಿಸಿದ್ದ ಬಲಿಜ ಸಮುದಾಯದ ಕಾರ್ಯಕ್ರಮವು ರಾಜಕೀಯ ವಾಗ್ವಾದಕ್ಕೆ ವೇದಿಕೆಯಾಗಿದೆ.