ಸಮಗ್ರ ನ್ಯೂಸ್ : ಕರಾವಳಿ ಅಭಿವೃದ್ಧಿ ಕಡೆಗಣಿಸಿದ್ರೆ ನಾವು ಪ್ರತ್ಯೇಕ ವಿಧಾನಸೌಧ ಕಟ್ಟಿಸಿಕೊಂಡು ಮಾತಾಡುವ ವ್ಯವಸ್ಥೆ ತರಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ಈ ಕೂಗೆಬ್ಬಿಸಿದ್ದಾರೆ.
ವಿಧಾನಸಭೆಯಲ್ಲಿ 69 ನಿಯಮದಡಿಯಲ್ಲಿ ಕರಾವಳಿ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಇಂದು ಚರ್ಚೆ ನಡೆಯಿತು. ಈ ವೇಳೆ ಸುನಿಲ್ ಕುಮಾರ್ ಮಾತನಾಡಿ, ಸದನದಲ್ಲಿ ಉತ್ತರ ಕರ್ನಾಟಕ, ಬೆಂಗಳೂರು ಬಗ್ಗೆ ಚರ್ಚೆ ಆಗುತ್ತದೆ. ಆದರೆ ಕರಾವಳಿ ಬಗ್ಗೆ ಯಾವತ್ತೂ ಚರ್ಚೆಗಳು ನಡೆದಿಲ್ಲ. ಟೆಂಪಲ್ ಟೂರಿಸಂ ವಿಚಾರವಾಗಿ ಕರಾವಳಿಯನ್ನು ಅಭಿವೃದ್ಧಿ ಪಡಿಸಬೇಕು. 330 ಕಿ.ಮೀ ಇರುವ ಬೀಚ್ ಟೂರಿಸಂ ಅಭಿವೃದ್ಧಿ ಪಡಿಸಬೇಕು ಎಂದು ಆಗ್ರಹಿಸಿದರು.
ಕರಾವಳಿಯನ್ನು ಬುದ್ಧಿವಂತರ ಜಿಲ್ಲೆ ಎಂದು ಕರೆಯುತ್ತಾರೆ. ಕರಾವಳಿ ಜಿಲ್ಲೆಯ ಜನ ರಾಷ್ಟ್ರೀಯತೆ, ಹಿಂದುತ್ವದಲ್ಲಿ ಮುಂಚೂಣಿಯಲ್ಲಿದ್ದಾರೆ. ಕರಾವಳಿ ಜನ ಹೋಟೆಲ್ ಮ್ಯಾನೇಜ್ಮೆಂಟ್, ದೇವಸ್ಥಾನ ಮ್ಯಾನೇಜ್ಮೆಂಟ್ ಹಾಗೂ ಖಾಸಗಿ ಬಸ್ ಮ್ಯಾನೇಜ್ಮೆಂಟ್‌ನಲ್ಲಿ ಪ್ರಸಿದ್ದರು. ಸರ್ಕಾರವನ್ನು ಅವಲಂಬಿಸದೇ ಸರ್ಕಾರಿ ಶಾಲೆಗಳನ್ನು ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದ್ದೇವೆ. ಆದರೆ ಕರಾವಳಿ ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರೀಶ್ ಪೂಂಜಾ, ಕರಾವಳಿ ಅಭಿವೃದ್ಧಿ ಕಡೆಗಣಿಸಿದ್ರೆ ನಾವು ಪ್ರತ್ಯೇಕ ವಿಧಾನಸೌಧ ಕಟ್ಟಿಸಿಕೊಂಡು ಮಾತಾಡುವ ವ್ಯವಸ್ಥೆ ತರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರು ಹರೀಶ್ ಪೂಂಜಾ ಮಾತಾಡುವಾಗ ಬೇಗ ಮುಗಿಸಿ ಎಂದರು. ಕರಾವಳಿ ಜಿಲ್ಲೆಗಳು ನಮ್ಮ ಜೊತೆಗೇ ಇರಬೇಕು. ನೀವೂ ನಾವೂ ಒಟ್ಟಿಗೆ ಇರಬೇಕು, ಅಪಸ್ವರ ಬೇಡ ಎಂದು ಕಾಂಗ್ರೆಸಿಗರು ಹೇಳಿದರು.