ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಫೆ.11ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಸುಳ್ಯದಲ್ಲಿ ರಾಜ್ಯದಲ್ಲೇ ಅತ್ಯಧಿಕ 41.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಮತ್ತು ಉಡುಪಿ ಮತ್ತು ಕೊಡಗು ಜಿಲ್ಲೆಯ ಕೆಲವು ಕಡೆ 38 ಡಿ.ಸೆ.ಗೂ ಅಧಿಕ ತಾಪಮಾನ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಮತ್ತು ಉಡುಪಿ ಜಿಲ್ಲೆಯ ಒಂದು ಕಡೆ 40 ಡಿ.ಸೆ.ಗೂ ಅಧಿಕ ತಾಪಮಾನ ದಾಖ ಲಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಭಾರೀ ಬಿಸಿಲು ಮತ್ತು ಆಧ್ರ ವಾತಾವರಣ ಇರುವ ಸಾಧ್ಯತೆ ಇದೆ.
ಭಾರತಿಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು, ಬಿಸಿಗಾಳಿ ಎಚ್ಚರಿಕೆ (ಹೀಟ್ ವೇವ್) ನೀಡಲಾಗಿದೆ.
ಮುಂದಿನ ಎರಡು ದಿನ ಬಿಸಿಗಾಳಿ ಮುಂದುವರಿಯುವ ಮುನ್ಸೂಚನೆ ಇದೆ. ಇದರಿಂದ ಹೀಟ್ ವೇವ್ ಸ್ಟ್ರೋಕ್ (ಶಾಖದ ಅಲೆ)ನಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಪ್ರತಿಯೊಬ್ಬರೂ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ದ. ಕ. ಜಿಲ್ಲೆಯ ಪಾಣೆಮಂಗಳೂರಿನಲ್ಲಿ 40.5 ಡಿ.ಸೆ. ತಾಪಮಾನ, ಮೂಡುಬಿದಿರೆಯಲ್ಲಿ 39, ಕೊಕ್ಕಡ ದಲ್ಲಿ 40.3, ಪುತ್ತೂರಿನಲ್ಲಿ 40.2, ಬಂಟ್ವಾಳದಲ್ಲಿ 38, ಸುಳ್ಯದಲ್ಲಿ 41.4, ಬೆಳ್ತಂಗಡಿಯಲ್ಲಿ 38.8, ಕಡಬದಲ್ಲಿ 40.4, ವಿಟ್ಲದಲ್ಲಿ 38.6, ಉಪ್ಪಿನಂಗಡಿಯಲ್ಲಿ 40, ಸಂಪಾಜೆಯಲ್ಲಿ 40.7, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 38 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿತ್ತು. ದ. ಕ. ಜಿಲ್ಲೆಯಲ್ಲಿ ಮಂಗಳವಾರ ಬಿಸಿಲಿನ ವಾತಾವರಣವಿತ್ತು. ಬೆಳಗ್ಗೆ ಮೋಡದಿಂದ ಕೂಡಿದ ವಾತಾವರಣ
ಇತ್ತು.