ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡವು 12 ವರ್ಷಗಳ ನಂತರ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಡುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವು ನ್ಯೂಜಿಲೆಂಡ್ ವಿರುದ್ಧ ಜಯಿಸಿದರೆ ‘ಚಾಂಪಿಯನ್’ ಕನಸು ಈಡೇರಲಿದೆ.
ಕಿವೀಸ್ ಬಳಗವೂ 25 ವರ್ಷಗಳ ನಂತರ ಪ್ರಶಸ್ತಿ ಮುಡಿಗೇರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಐಸಿಸಿಯ ಎಲ್ಲ ಟೂರ್ನಿಗಳಲ್ಲಿ ಕಿವೀಸ್ ಬಳಗವು 10-6ರಿಂದ ಭಾರತದ ಎದುರು ಮುನ್ನಡೆಯಲ್ಲಿದೆ. ಆದರೆ ಅಂಕಿ ಅಂಶಗಳನ್ನು ಮತ್ತಷ್ಟು ಸಾಣಿಸಿದರೆ ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ಯೂ ಕಿವೀಸ್ ತಂಡವು 3-1ರ ಮುನ್ನಡೆಯಲ್ಲಿದೆ.
ಈ ಟೂರ್ನಿಯ ಗುಂಪು ಹಂತದಲ್ಲಿ ಉಭಯ ತಂಡಗಳು ಒಂದು ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಭಾರತ ಗೆದ್ದಿತ್ತು. ಹೈಬ್ರಿಡ್ ಮಾದರಿಯ ಟೂರ್ನಿ ಇದಾಗಿರುವುದರಿಂದ ಭಾರತ ತಂಡವು ತನ್ನ ಎಲ್ಲ ಪಂದ್ಯಗಳನ್ನೂ ದುಬೈನಲ್ಲಿ ಆಡುತ್ತಿದೆ. ಫೈನಲ್ ಕೂಡ ಇಲ್ಲಿಯೇ ಇದೆ. ಇದರಿಂದಾಗಿ ಭಾರತಕ್ಕೆ ಹೆಚ್ಚು ಅನುಕೂಲವಾಗಿದೆ ಎಂಬ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.
ಇದರ ನಡುವೆಯೂ ಕಿವೀಸ್ ತಂಡವು ಪ್ರಶಸ್ತಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಸೆಮಿಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಭರ್ಜರಿ ಜಯ ಸಾಧಿಸಿ ಬಂದಿರುವ ಮಿಚೆಲ್ ಸ್ಯಾಂಟನರ್ ಬಳಗಕ್ಕೆ ಭಾರತದ ಸ್ಪಿನ್ ಶಕ್ತಿಯನ್ನು ಮೀರಿ ನಿಲ್ಲುವ ಸವಾಲು ಇದೆ.