ಸಮಗ್ರ ನ್ಯೂಸ್: ಬಂಟ್ವಾಳದ ಫರಂಗಿಪೇಟೆಯಿಂದ ಫೆಬ್ರವರಿ 25ರಂದು ನಾಪತ್ತೆಯಾಗಿದ್ದ ಬಂಟ್ವಾಳ ವಿದ್ಯಾರ್ಥಿ ದಿಗಂತ್ ಹನ್ನೆರಡು ದಿನಗಳ ಬಳಿಕ ಪತ್ತೆಯಾಗಿದ್ದಾನೆ.
ದೇವಾಲಯಕ್ಕೆ ಹೋಗಿ ಬರುತ್ತೇನೆಂದು ತಿಳಿಸಿ ಮನೆಯಿಂದ ಹೊರಟಿದ್ದ ದಿಗಂತ್ ನಾಪತ್ತೆಯಾಗಿದ್ದ. ಇಂದು (ಮಾರ್ಚ್ 8)ಉಡುಪಿಯ ಡಿ ಮಾರ್ಟ್ ನಿಂದ ತನ್ನ ತಾಯಿಗೆ ಕರೆ ಮಾಡಿದ ದಿಗಂತ್ ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿ ಡಿ ಮಾರ್ಟ್ ಸಿಬ್ಬಂದಿಯ ಮೊಬೈಲ್ ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಇನ್ನು ದಿಗಂತ್ ನನ್ನು ಅಪಹರಣ ಮಾಡಲಾಗಿದೆ ಎಂಬ ಆರೋಪ ಸಹ ದೊಡ್ಡ ಮಟ್ಟದಲ್ಲಿ ಕೇಳಿಬಂದಿತ್ತು. ಸದ್ಯ ಬಾಲಕ ಪತ್ತೆಯಾದ ನಂತರವೂ ಸಹ ತನ್ನನ್ನು ಯಾರೋ ಎಳೆದುಕೊಂಡು ಹೋದರು ಎಂದು ತಿಳಿಸಿದ್ದಾನೆ. ನಾನಾಗಿ ಹೋಗಿಲ್ಲ ಒತ್ತಾಯ ಮಾಡಿ ತನ್ನನ್ನು ಕರೆದೊಯ್ದರು ಎಂದು ದಿಗಂತ್ ತಿಳಿಸಿದ್ದಾನೆ.
ನಾಪತ್ತೆಯಾಗಿದ್ದ ಆತನಿಗಾಗಿ ಮನೆಯವರು ಹಾಗೂ ಸ್ಥಳೀಯರು ಹುಡುಕಾಡಿದಾಗ ಊರಿನ ರೈಲ್ವೆ ಹಳಿಯಲ್ಲಿ ಆತನ ಮೊಬೈಲ್ ಮತ್ತು ಚಪ್ಪಲಿಗಳು ದೊರೆತಿದ್ದವು. ಆತನನ್ನು ಮಾದಕ ದ್ರವ್ಯ ವ್ಯಸನಿಗಳು ಅಪಹರಿಸಿರಬಹುದು ಎಂಬ ಸಂಶಯ ವ್ಯಕ್ತವಾಗಿತ್ತು. ಆತ ಕಾಣೆಯಾದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಆತನನ್ನು ಶೀಘ್ರವೇ ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿ ಸ್ಥಳೀಯರು ಫರಂಗಿಪೇಟೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಮಾರ್ಚ್ 1ರಂದು ಪ್ರತಿಭಟನೆ ನಡೆಸಿದ್ದರು. ಪೊಲೀಸ್ ಇಲಾಖೆ ಆತನ ಪತ್ತೆಗೆ ಕ್ರಮ ವಹಿಸಿಲ್ಲ ಎಂದು ಆರೋಪಿಸಿದ್ದರು. ಪಶ್ಚಿಮ ವಲಯ ಡಿಐಜಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಮತ್ತಿತರ ಪೊಲೀಸ್ ಅಧಿಕಾರಿಗಳು ಫರಂಗಿಪೇಟೆಗೆ ಧಾವಿಸಿ ತನಿಖೆಗೆ ಮಾರ್ಗದರ್ಶನ ಮಾಡಿದ್ದರು. ರೈಲ್ವೆ ಪೊಲೀಸ್ ಜೊತೆಗೆ ಸೇರಿಯೂ ಹುಡುಕಾಟ ನಡೆಸಿದ್ದರು. ದಿಗಂತ್ ಪತ್ತೆಯಾಗದೇ ಇದ್ದುದರಿಂದ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.