ಸಮಗ್ರ ನ್ಯೂಸ್: ಸದ್ಯದಲ್ಲೇ ಐಪಿಎಲ್ ಅಬ್ಬರ ಶುರುವಾಗಲಿದ್ದು, ಹೀಗಾಗಿ ಮಾರ್ಚ್ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ಅನ್‌ಬಾಕ್ಸ್ ಟಿಕೆಟ್‌ಗಳು ಒಂದೇ ಗಂಟೆಯಲ್ಲಿ ಸೋಲ್ಡ್ ಔಟ್ ಆಗಿವೆ. ಪ್ರತಿ ವರ್ಷದಂತೆ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಮುಂಚಿತವಾಗಿ ಐಕಾನಿಕ್ ಆರ್‌ಸಿಬಿ ಆನ್‌ಬಾಕ್ಸ್ ಈವೆಂಟ್‌ನ ಟಿಕೆಟ್‌ಗಳ ಆನ್‌ಲೈನ್ ಸೇಲ್ ಇಂದು ಆರಂಭವಾಗಿತ್ತು. ಆರಂಭವಾದ ಒಂದೇ ಗಂಟೆಯೊಳಗೆ ಟಿಕೆಟ್‌ಗಳು ಮಾರಾಟವಾಗಿವೆ. ಮಾರ್ಚ್ 22ರಂದು ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುವ ಮೂಲಕ ಆರ್‌ಸಿಬಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಅನ್‌ಬಾಕ್ಸಿಂಗ್‌ನಲ್ಲಿ ನೂತನ ನಾಯಕ ರಜತ್ ಪಟಿದಾರ್ ನೇತೃತ್ವದ ಆರ್‌ಸಿಬಿ ತಂಡದ ನ್ಯೂ ಲುಕ್ ರಿವೀಲ್ ಆಗಲಿದೆ. ಈ ವರ್ಷದ ಈವೆಂಟ್ ಹಿಂದೆಂದಿಗಿಂತಲೂ ದೊಡ್ಡದಾಗಿರಲಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಮೈದಾನದಲ್ಲಿ ಕಣ್ಣುಂಬಿಕೊಳ್ಳುವ ಅವಕಾಶ ಪಡೆಯುತ್ತಾರೆ.
ಅಭಿಮಾನಿಗಳ ನಿರಂತರ ಉತ್ಸಾಹಕ್ಕೆ ಧನ್ಯವಾದ ಹೇಳಿದ ಆರ್‌ಸಿಬಿಯ ಮುಖ್ಯ ಸಿಒಒ ರಾಜೇಶ್ ಮೆನನ್, “ಆರ್‌ಸಿಬಿ ಅನ್‌ಬಾಕ್ಸ್ ನಮ್ಮ ಸೀಸನ್ ಅವಿಭಾಜ್ಯ ಅಂಗವಾಗಿದೆ. ಪಂದ್ಯ ಆರಂಭವಾಗುವ ಮೊದಲು ಅಭಿಮಾನಿಗಳು ತಂಡದೊಂದಿಗೆ ಸಂಪರ್ಕ ಸಾಧಿಸಲು ಈ ಈವೆಂಟ್ ಒಂದು ಅನನ್ಯ ಅವಕಾಶ ನೀಡಲಿದೆ. ನಮ್ಮ ಅಭಿಮಾನಿಗಳು ಸದಾ ತಮ್ಮ ಅದ್ಭುತ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ಈ ಕಾರ್ಯಕ್ರಮವು ಫ್ರಾಂಚೈಸಿ ಹಾಗೂ ಅಭಿಮಾನಿಗಳ ನಡುವಿನ ಬಾಂಧವ್ಯದ ಆಚರಣೆಯಾಗಿದೆ. ಹಾಗೂ ಅಭಿಮಾನಿಗಳಿಗೆ ಮತ್ತೊಂದು ಸ್ಮರಣೀಯ ಅನುಭವ ಸೃಷ್ಟಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದರು.