ಸಮಗ್ರ ನ್ಯೂಸ್: ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಕ್ಕೆ ಅನುಮತಿ ನೀಡುವ ನಿಯಮಗಳನ್ನು ಸಡಿಲಗೊಳಿಸಿ ಎಂದು ಸದನದಲ್ಲಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಸ್ತಾಪಿಸಿದರು.
ಗಮನ ಸೆಳೆಯುವ ಸೂಚನೆ ವೇಳೆ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನ ನಿಲ್ಲಿಸುವಂತೆ ಅಡೆತಡೆಗಳು ಇವೆ. ಅದನ್ನು ಸಡಿಲಗೊಳಿಸಿ ಎಂದು ಮನವಿ ಮಾಡಿದರು.
ಈ ವೇಳೆ ಸ್ಪೀಕರ್ ಮಾತನಾಡಿ, ಮೊದಲು ಆ ರೀತಿ ಇರಲಿಲ್ಲ. 10 ಗಂಟೆಯ ನಂತರ ಧ್ವನಿವರ್ಧಕ ಬಳಸಬಾರದು ಎಂದು ನಿಯಮ ತಂದರು. ಈಗ ಎಲ್ಲಾ ಕಡೆ ಅಧಿಕಾರಿಗಳು ಈ ರೀತಿಯ ನಿಯಮ ಮಾಡುತ್ತಿದ್ದಾರೆ. ಸರ್ಕಾರ ಸರಿಪಡಿಸಿ ಎಂದು ಸೂಚಿಸಿದರು.
ಗೃಹ ಸಚಿವರ ಪರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಮ್ಮ ಸಂಸ್ಕೃತಿಗೆ ತೊಂದರೆ ಆಗಬಾರದು. ದೇಶಿಯ ಆಟಗಳಿಗೆ ಯಾವುದೇ ತೊಂದರೆ ಆಗದ ರೀತಿ ಗೃಹ ಸಚಿವರ ಜೊತೆ ಚರ್ಚಿಸಿ ನಿಯಮಗಳನ್ನು ಸರಳೀಕರಣ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಶಾಸಕ ನೇಮಿರಾಜ್ ನಾಯ್ಕ್ ಮಾತನಾಡಿ, ಕೋಳಿಅಂಕಕ್ಕೆ ತೊಂದರೆ ಆಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಿದರು. ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಸುನೀಲ್ ಕುಮಾರ್, ಕೋಳಿ ಅಂಕ ಮೊದಲಿನಿಂದಲೂ ಇದೆ. ಕೋಳಿ ಅಂಕದ ಕೋಳಿ ರುಚಿ ಬಹಳ ಚೆನ್ನಾಗಿದೆ. ನೀವು ಬಂದರೆ ಆ ರುಚಿ ತೋರಿಸುತ್ತೇವೆ ಎಂದು ಡಿಕೆಶಿಗೆ ಸುನೀಲ್ ಹೇಳಿದರು.