ಸಮಗ್ರ ನ್ಯೂಸ್: ರಾಜ್ಯದೆಲ್ಲೆಡೆ ಹಕ್ಕಿ ಜ್ವರ ಭೀತಿ ಶುರುವಾಗಿದ್ದು, ಇದೀಗ ಚಿಕ್ಕಬಳ್ಳಾಪುರದ ವರದಹಳ್ಳಿ ಗ್ರಾಮದ ನಾಟಿ ಕೋಳಿಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದೆ. ಗ್ರಾಮದ ರೈತ ದ್ಯಾವಪ್ಪ ಎಂಬುವರಿಗೆ ಸೇರಿದ 23 ಕೋಳಿಗಳು ಫೆಬ್ರವರಿ 23ರಂದು ಮೃತಟ್ಟಿದ್ದವು. ಬಳಿಕ ಅದೇ ಗ್ರಾಮದ ರತ್ನಮ್ಮಗೆ ಸೇರಿದ 5 ಕೋಳಿಗಳು ಮೃತಪಟ್ಟಿದ್ದವು. ಇದರಿಂದ ಆತಂಕಗೊಂಡ ದ್ಯಾವಪ್ಪ ಹಾಗೂ ರತ್ನಮ್ಮ ಯಾರೊ ಕೋಳಿಗಳಿಗೆ ವಿಷ ಹಾಕಿದ್ದಾರೆ ಎಂದು ನಂಬಿದ್ದರು.
ಸ್ಥಳಕ್ಕೆ ಆಗಮಿಸಿದ ಪಶುಪಾಲಾನಾ ಇಲಾಖೆಯ ವೈದ್ಯರು ಪರಿಶೀಲನೆ ನಡೆಸಿ ಮೃತ ಕೋಳಿಗಳ ಸ್ಯಾಂಪಲ್ ಅನ್ನು ಸಂಗ್ರಹಿಸಿ ಹೆಬ್ಬಾಳದಲ್ಲಿನ ಭಾರತೀಯ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಗೆ ರವಾನಿಸಿದರು. ಲ್ಯಾಬ್ ವರದಿಯಲ್ಲಿ ಕೋಳಿಗಳ ಸಾವಿಗೆ ಹಕ್ಕಿಜ್ವರವೇ ಕಾರಣ ಎಂದು ಧೃಡವಾಗಿದೆ. ಜಿಲ್ಲಾ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಅಲರ್ಟ್ ಆಗಿದ್ದು, ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಸ್ವಚ್ಚತೆ, ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಿದ್ದಾರೆ.
ಗ್ರಾಮಕ್ಕೆ ಹೊಂದಿಕೊಂಡಿರುವ ಕೋಳಿ ಪಾರ್ಮ್ಗಳಲ್ಲಿ ಮುಂಜಾಗೃತೆ ಕೈಗೊಳ್ಳಲು ಮನವಿ ಮಾಡಿದ್ದಾರೆ. ವರದಹಳ್ಳಿ ಗ್ರಾಮದಿಂದ ಕೋಳಿಗಳ ಸಾಗಾಣಿಕೆಗೆ ಸಂಪೂರ್ಣ ಬಂದ್ ಮಾಡಲಾಗಿದೆ.