ಸಮಗ್ರ ನ್ಯೂಸ್: ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವರದಿಯ ಆಧಾರದ ಮೇಲೆ ವಿವಾದಾತ್ಮಕ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ ಎಂದು ವರದಿಯಾಗಿದೆ. ಫೆ.13ರಂದು ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಯನ್ನು, ಫೆ.19ರಂದು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
2025 ರ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವರದಿಯನ್ನು ಮಂಡಿಸಲಾಯಿತು. ಪ್ರತಿಪಕ್ಷಗಳ ಗದ್ದಲದ ನಡುವೆ ಎರಡೂ ಸದನಗಳಲ್ಲಿ ಕಲಾಪಗಳನ್ನು ಸ್ವಲ್ಪ ಸಮಯದವರೆಗೆ ಮುಂದೂಡಲಾಯಿತು.
ವಿರೋಧ ಪಕ್ಷದ ಸಂಸದರು ತಮ್ಮ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಜೆಪಿಸಿ ವರದಿಯಿಂದ ತಿರುಚಲಾಗಿದೆ ಎಂದು ಹೇಳಿಕೊಂಡರು. ಆದರೆ, ಈ ಆರೋಪಗಳನ್ನು ಕೇಂದ್ರ ಸರಕಾರ ಅಲ್ಲಗಳೆದಿತ್ತಾದರೂ, ಸಮಿತಿಗೆ ಕಳಂಕ ತಗಲುವ ಸಾಧ್ಯತೆ ಇದ್ದಾಗ ಅಧ್ಯಾಯಗಳನ್ನು ತೆಗೆದು ಹಾಕುವ ಅಧಿಕಾರ ಜಂಟಿ ಸದನ ಸಮಿತಿಯ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗಿದೆ ಎಂದು ಸಮರ್ಥಿಸಿಕೊಂಡಿತ್ತು.
ನಂತರ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ಪ್ರತಿಭಟನಾನಿರತ ಸಂಸದರೊಂದಿಗೆ ನಡೆದಿದ್ದ ಸಭೆಯಲ್ಲಿ ವಿಪಕ್ಷಗಳ ಸದಸ್ಯರ ಭಿನ್ನಮತದ ಟಿಪ್ಪಣಿಗಳನ್ನು ಮೂಲ ಹಾಗೂ ಪೂರ್ಣ ರೂಪದಲ್ಲಿ ವರದಿಯಲ್ಲಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿತ್ತು.
ಕಳೆದ ವಾರ ಕೇಂದ್ರ ಸಚಿವ ಸಂಪುಟ ವರದಿಯನ್ನು ಅಂಗೀಕರಿಸಿದ್ದು, ಮಾರ್ಚ್ 10 ರಂದು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ವಕ್ಫ್ ಮಸೂದೆಯನ್ನು ಮಂಡಿಸಲು ದಾರಿ ಮಾಡಿಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿ, ವಿರೋಧ ಪಕ್ಷದ ಭಿನ್ನಾಭಿಪ್ರಾಯದ ನಡುವೆಯೂ ಶಾಸನಕ್ಕೆ ಹಲವಾರು ತಿದ್ದುಪಡಿಗಳನ್ನು ಸೂಚಿಸಿತ್ತು. ಮಂಡಿಸಲಾದ 44 ತಿದ್ದುಪಡಿಗಳಲ್ಲಿ, 14 ಷರತ್ತುಗಳಿಗೆ ಬದಲಾವಣೆಗಳನ್ನು ಎನ್‌ಡಿಎ ಸದಸ್ಯರು ಸೂಚಿಸಿದರು, ಇವೆಲ್ಲವನ್ನೂ ಮತದಾನದ ನಂತರ ಸಮಿತಿಯು ಅಂಗೀಕರಿಸಿತು. ಆದರೆ ವಿರೋಧ ಪಕ್ಷಗಳು ಸೂಚಿಸಿದ ಎಲ್ಲಾ ಬದಲಾವಣೆಗಳನ್ನು ನಿರಾಕರಿಸಲಾಗಿದೆ.