ಸಮಗ್ರ ನ್ಯೂಸ್: ಪ್ರಯೋಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳ ಇಂದಿಗೆ ಸಂಪನ್ನಗೊಂಡಿದೆ. ಈ ಹಿಂದೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ಕೆಲವು ಹಿರಿಯ ಸಂತರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಇದೇ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಬಡತನವು ಅಂತ್ಯಗೊಳ್ಳುತ್ತದೆಯೇ ಎಂದು ಪ್ರಶ್ನಿಸಿದ್ದರು. ಬಿಜೆಪಿ ನಾಯಕರು ಕ್ಯಾಮೆರಾಗಳಿಗೆ ಪೋಸ್ ನೀಡಲು ಸ್ನಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.
ಖರ್ಗೆ ಅವರ ಈ ಮಾತುಗಳು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ನಾಯಕರು, ಕಾರ್ಯಕರ್ತರು ಖರ್ಗೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಯಾಗ್ ರಾಜ್ ನ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದರು. ಈ ಮೂಲಕ ಬಿಜೆಪಿ ನಾಯಕರು ಡಿಕೆಶಿ ನಡೆಯನ್ನು ಇಟ್ಟುಕೊಂಡೇ ಖರ್ಗೆ ಅವರಿಗೆ ಟಾಂಗ್ ಕೊಟ್ಟಿದ್ದರು. ಇದರ ಮಧ್ಯ ಕೋಟ್ಯಾಂತರ ಜನರು ಬರುವ ಪ್ರಯಾಗ್ರಾಜ್ನಲ್ಲಿ ಉತ್ತರ ಪ್ರದೇಶ ಸರ್ಕಾರ ಸರಿಯಾಗಿ ವ್ಯವಸ್ಥೆ ಮಾಡಿಲ್ಲ. ಕುಡಿಯಲು ನೀರಿಲ್ಲ, ಟಾಯ್ಲೇಟ್ಗಳಿಗೆ ಭಕ್ತರು ಪರದಾಡಿದ್ದರು ಅಂತೆಲ್ಲಾ ಆರೋಪಗಳು ಕೇಳಿಬಂದಿದ್ದವು.
ಆದ್ರೆ, ಈ ಎಲ್ಲಾ ಆರೋಪಗಳನ್ನು ಸ್ವತಃ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಲ್ಲಗಳೆದಿದ್ದು, ಎಲ್ಲಾ ವ್ಯವಸ್ಥೆ ಚೆನ್ನಾಗಿತ್ತು ಎಂದು ಯೋಗಿ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.