ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದಿದೆ. ಬಹಳ ವರ್ಷಗಳ ಬೇಡಿಕೆಯಾಗಿದ್ದ ಮಂಗಳೂರು- ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಅನುಮತಿ ನೀಡಿದೆ.
ಈ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಈ ರೈಲು ಸೇವೆ ವಿಸ್ತರಣೆಯಿಂದ ಪ್ರತಿನಿತ್ಯ ಸಂಚಾರ ನಡೆಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ಸುಮಾರು 18 ವರ್ಷಗಳಿಂದ ಮಂಗಳೂರು-ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂದು ಹೋರಾಟ ನಡೆಸಲಾಗುತ್ತಿತ್ತು. ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಈ ಪ್ರಸ್ತಾವನೆಗೆ ಅನುಮೋದನೆ ನೀಡಿ 2024ರ ನವೆಂಬರ್‌ನಲ್ಲಿ ರೈಲ್ವೆ ಮಂಡಳಿಗೆ ಶಿಫಾರಸು ಕಳಿಸಿತ್ತು.
ಈಗ ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ರೋಡ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಭಾರತೀಯ ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕ (ಕೋಚಿಂಗ್) ವಿವೇಕ್ ಕುಮಾರ್ ಸಿನ್ಹಾ ಆದೇಶವನ್ನು ಹೊರಡಿಸಿದ್ದಾರೆ. ಅಲ್ಲದೇ ಈ ಮಂಗಳೂರು-ಪುತ್ತೂರು ನಡುವೆ ಸಂಚಾರ ನಡೆಸುತ್ತಿರುವ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ.
ಸಂಸದರ ಮಾಹಿತಿ:
ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಈ ಕುರಿತು ಸಾಮಾಜಿ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ‘ಕಬಕ ಪುತ್ತೂರು – ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಸುಬ್ರಹ್ಮಣ್ಯಕ್ಕೂ ವಿಸ್ತರಣೆ’ ಎಂದು ಹೇಳಿದ್ದಾರೆ. ಪೋಸ್ಟ್‌ನಲ್ಲಿ ಪರಿಷ್ಕೃತ ವೇಳಾಪಟ್ಟಿಯ ಮಾಹಿತಿ ನೀಡಿದ್ದಾರೆ.
‘ದಕ್ಷಿಣ ಕನ್ನಡದ ರೈಲು ಪ್ರಯಾಣಿಕ ಬಹುಕಾಲದ ಬೇಡಿಕೆಯಾದ ಮಂಗಳೂರು-ಕಬಕ ಪುತ್ತೂರು ಪ್ಯಾಸೆಂಜರ್ ರೈಲು ಓಡಾಟವನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸುವ ಪ್ರಸ್ತಾವನೆಗೆ ಕೇಂದ್ರ ರೈಲ್ವೆ ಮಂಡಳಿ ಅನುಮೋದನೆ ನೀಡಿದ್ದು ಈ ಮೂಲಕ ನಮ್ಮ ನಿರಂತರ ಪ್ರಯತ್ನಕ್ಕೆ ಫಲ ದೊರಕಿದೆ ಎಂಬ ವಿಚಾರ ಜಿಲ್ಲೆಯ ಜನತೆಗೆ ತಿಳಿಸಲು ಅತೀವ ಸಂತಸವಾಗುತ್ತಿದೆ’ ಎಂದು ಹೇಳಿದ್ದಾರೆ.
‘ರೈಲ್ವೆ ಸಚಿವರು, ಅಧಿಕಾರಿಗಳು, ರೈಲ್ವೆ ಮಂಡಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದಂತೆ, ಈ ವಿಸ್ತರಣೆಯಿಂದ ಮಂಗಳೂರು ನಗರದಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ಸಂಪರ್ಕಕ್ಕೆ ಇದು ಸಹಕಾರಿಯಾಗಲಿದೆ. ಮಾತ್ರವಲ್ಲದೇ ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸಹಾಯಕವಾಗಲಿದೆ. ಮಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ, ಯಾತ್ರಾರ್ಥಿಗಳಿಗೆ, ಜಿಲ್ಲೆಯ ಜನರಿಗೆ ಅನುಕೂಲಕರವಾಗಲಿದೆ’ ಎಂದು ಸಂಸದರು ತಿಳಿಸಿದ್ದಾರೆ.
‘ನಮ್ಮ ಬೇಡಿಕೆ ಅನುಮೋದಿಸಿ ದಕ್ಷಿಣ ಕನ್ನಡದ ಜನರ ಬಹುಕಾಲದ ಕೋರಿಕೆಯನ್ನು ಈಡೇರಿಸಿದ ನಮ್ಮ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಸಚಿವ ಶ್ರೀ ವಿ. ಸೋಮಣ್ಣ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದು ಸಂಸದರು ಹೇಳಿದ್ದಾರೆ.
ಪರಿಷ್ಕೃತ ವೇಳಾಪಟ್ಟಿ:
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮುಂಜಾನೆ 4 ಗಂಟೆಗೆ ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡಲಿದೆ. ಬೆಳಗ್ಗೆ 6.30ಕ್ಕೆ ಸುಬ್ರಮಣ್ಯ ರೋಡ್‌ಗೆ ತಲುಪಲಿದೆ. ಬೆಳಗ್ಗೆ 7 ಗಂಟೆಗೆ ಸುಬ್ರಮಣ್ಯ ರೋಡ್‌ನಿಂದ ಹೊರಟು, 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.
ಸಂಜೆ ರೈಲು 5.45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಟು ರಾತ್ರಿ 8.10ಕ್ಕೆ ಸುಬ್ರಮಣ್ಯ ರೋಡ್ ತಲುಪಲಿದೆ. ರಾತ್ರಿ 8.40ಕ್ಕೆ ಸುಬ್ರಮಣ್ಯ ರೋಡ್‌ನಿಂದ ಹೊರಟು 11.10ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.
ಈ ರೈಲು ಸೇವೆ ವಿಸ್ತರಣೆ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹು ಬೇಡಿಕೆಯಾಗಿತ್ತು. ಮೀಟರ್ ಗೇಜ್ ಕಾಲದಲ್ಲಿ ಸುಬ್ರಮಣ್ಯದಿಂದ ಮಂಗಳೂರಿಗೆ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಬರ್ ರೈಲು ಸಂಚರಿಸುತ್ತಿತ್ತು. ರೈಲು ನಂಬರ್ 06484/ 85 ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಆದರೆ, ಹಳಿ ಪರಿವರ್ತನೆ ಬಳಿಕ ರೈಲು ಪುತ್ತೂರು ತನಕ ಮಾತ್ರ ಸಂಚಾರ ನಡೆಸುತ್ತಿತ್ತು. ಇದನ್ನು ಸುಬ್ರಮಣ್ಯ ರೋಡ್ ತನಕ ವಿಸ್ತರಣೆ ಮಾಡಬೇಕು ಎಂದು ಪದೇ ಪದೇ ಬೇಡಿಕೆ ಇಡಲಾಗಿತ್ತು.