ಸಮಗ್ರ ನ್ಯೂಸ್: 24 ವರ್ಷಗಳಿಂದ ಮನೆ ಬಿಟ್ಟು ಹೋಗಿದ್ದವ ಇದೀಗ ಮತ್ತೆ ವಾಪಸ್ ಮನೆಗೆ ಸೇರಿದ್ದಾನೆ. ಇದಕ್ಕೆಲ್ಲ ಕಾರಣ ಮಹಾ ಕುಂಭಮೇಳ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ರಮೇಶ ಚೌಧರಿ ಕಳೆದ 2001 ರಲ್ಲಿ ಮನೆಯಿಂದ ನಾಪತ್ತೆಯಾಗಿದ್ದರು, ಇದೀಗ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಾದಲ್ಲಿ ಪತ್ತೆಯಾಗಿದ್ದಾರೆ.
24 ವರ್ಷಗಳಿಂದ ನಾಪತ್ತೆಯಾಗಿದ್ದ ರಮೇಶ ಚೌಧರಿ ಕುಂಭಮೇಳಕ್ಕೆ ತೆರಳಿದ್ದವರಿಗೆ ಕಾಶಿಯಲ್ಲಿ ಸಿಕ್ಕಿದ್ದಾರೆ. ಇನ್ನು ರಮೇಶನನ್ನು ತಮ್ಮ ವಾಹನದಲ್ಲಿ ವಾಪಸ್ ಬಳೂತಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ. ಸುಮಾರು 24 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ರಮೇಶ ಚೌಧರಿ ಬಳೂತಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಆತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತನನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ಪುಣ್ಯ ಸ್ಥಾನ ಮಾಡಿದ ರಮೇಶ ಹಾಗೂ ತಂಡ ಕಾಶಿಗೆ ತೆರಳಿತ್ತು. ಕಾಶಿಯಲ್ಲಿ ಮಲ್ಲನಗೌಡ ಕಣ್ಣಿಗೆ ರಮೇಶ ಸನ್ಯಾಸಿಯ ಬಟ್ಟೆಯಲ್ಲಿ ಕಂಡಿದ್ದಾರೆ. ರಮೇಶನನ್ನು ಕಂಡ ಮಲ್ಲನಗೌಡ ಈತ ನಮ್ಮೂರಿನವ ಎಂದು ನೋಡಿ ಮಾತನಾಡಿಸಿದ್ದಾರೆ. ಆಗ ಆತ ಬಳೂತಿ ಗ್ರಾಮದ ರಮೇಶ ಚೌಧರಿ ಎಂಬುದು ಗೊತ್ತಾಗಿದೆ. ಇನ್ನೂ ಕನ್ನಡದಲ್ಲಿ ರಮೇಶನನ್ನು ಮಾತನಾಡಿಸಿ ವಿಚಾರಿಸಿದ್ದಾರೆ. ರಮೇಶ ತನ್ನೆಲ್ಲಾ ಮಾಹಿತಿ ನೀಡಿದ್ದಾರೆ. ಮನೆ ಬಿಟ್ಟು ಊರೂರು ಅಲೆಯುತ್ತಾ ಬಿಹಾರದ ಪಾಟ್ನಾಕ್ಕೆ ಹೋಗಿ ಅಲ್ಲಿ ಡಾಂಬರೀಕರಣ ಕೆಲಸ ಮಾಡುತ್ತಾ ಕಾಲ ಕಳೆದೆ. ಊರು ನೆನಪು ಆಗುತ್ತಿತ್ತು. ಊರಿಗೆ ಹೋಗಬೇಕೆಂದು ಒಂದೆರಡು ಬಾರಿ ಪ್ರಯತ್ನ ಮಾಡಿ ಬಿಟ್ಟೆ. ನನಗೆ ನನ್ನದೆಯಾದ ಒತ್ತಡವಿತ್ತು ಎಂದೆಲ್ಲಾ ಹೇಳಿದ್ಧಾನೆ. ತನ್ನ ಪೂರ್ವಾಪರ, ತಂದೆ, ತಾಯಿ ಹಾಗೂ ಕುಟುಂಬಸ್ಥರ ಹೆಸರುಗಳನ್ನು ಕೂಡ ಹೇಳಿದ್ದಾನೆ. ಸಂಬಂಧಿಕರಿಗೆ ವಿಡಿಯೋ ಕಾಲ ಮಾಡಿ ರಮೇಶ ಸಿಕ್ಕಿದ್ದರ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ ಕಾಶಿಯಿಂದಲೇ ಕಟುಂಬಸ್ಥರೊಂದಿಗೆ ಮಾತನಾಡಿದ್ದಾನೆ. ನಂತರ ತಮ್ಮದೇ ವಾಹನದಲ್ಲಿ ಊರಿಗೆ ಕರೆದುಕೊಂಡು ಬಂದಿದ್ದಾರೆ.