ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳವು ಅಂತಿಮ ಘಟ್ಟಕ್ಕೆ ತಲುಪಿದೆ. ಈಗಾಗಲೇ 60 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು, ನಾಳೆ ನಡೆಯುವ ಕೊನೆಯ ಪುಣ್ಯ ಸ್ನಾನದಲ್ಲಿ ಅತಿ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಜನವರಿ 13 ರಿಂದ ಆರಂಭವಾದ ಈ ಮಹಾ ಕುಂಭ ಮೇಳ ಪವಿತ್ರ ಸ್ನಾನ ಇದೇ ಫೆ.26 ಅಂದರೆ ನಾಳೆ ಮುಕ್ತಾಯವಾಗಲಿದೆ. ಕುಂಭ ಮೇಳದಲ್ಲಿ ಬರುವ ಪವಿತ್ರ ಸ್ನಾನಕ್ಕೂ ಶಾಹಿ ಸ್ನಾನಕ್ಕೂ ಬಹಳ ಪ್ರಮುಖ್ಯತೆ ಇದೆ. ಅದರಂತೆ ಕುಂಭ ಮೇಳದ ಕೊನೆಯ ಪವಿತ್ರ ಸ್ನಾನ ನಾಳೆ ನಡೆಯಲಿದ್ದು, ಕೋಟ್ಯಂತರ ಭಕ್ತರು ಆಗಮಿಸಲಿದ್ದಾರೆ.
ನಾಳೆ ನಡೆಯಲಿರುವ ಕೊನೆಯ ಸ್ನಾನದ ವಿಶೇಷವೆಂದರೆ ಶಿವರಾತ್ರಿಯಂದು ಸೂರ್ಯ, ಚಂದ್ರ ಹಾಗೂ ಶನಿಯ ತ್ರಿಗ್ರಹ ರೂಪುಗೊಳ್ಳುತ್ತದೆ. ಇದನ್ನು ಯಶಸ್ಸು ಮತ್ತು ಸಮೃದ್ಧಿಯ ಸಂಕೇತ ಎನ್ನಲಾಗಿದೆ. ಈ ದಿನ ಪವಿತ್ರ ಸ್ನಾನ ಮಾಡಿದರೆ ಯಶಸ್ಸು ಲಭಿಸುತ್ತದೆ ಎಂಬುವುದು ನಂಬಿಕೆ..
ಇನ್ನು ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ದೇಶ ಮಾತ್ರವಲ್ಲ ವಿದೇಶದಿಂದಲೂ ಭಕ್ತರು ಆಗಮಿಸಿ ಪವಿತ್ರ ಸ್ನಾನ ಮಾಡಿದ್ದು, ಇಲ್ಲಿಯ ವರೆಗೆ ಸುಮಾರು 60 ಕೋಟಿಯಷ್ಟು ಜನ ಭಕ್ತರು ತೀರ್ಥ ಸ್ನಾನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.
ಇದೀಗ ಕೊನೆಯ ಪವಿತ್ರ ಸ್ನಾನವಾಗಿದ್ದು, ಕೋಟ್ಯಂತರ ಭಕ್ತರು ಪ್ರಯಾಗರಾಜ್ ಗೆ ಆಗಮಿಸಲಿದ್ದಾರೆ. ಹೀಗಾಗಿ ಬಿಗಿ ಭದ್ರತೆ ಮಾಡಿಕೊಂಡಿದ್ದು, ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ಆಯೋಜಿಸಲಾಗಿದೆ ಅಷ್ಟೇ ಅಲ್ಲದೆ ಯಾವುದೇ ದುರಂತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.