ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ಮಂಗಳವಾರ ಮುಂಜಾನೆ 6.10ರ ಸುಮಾರಿಗೆ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.
ಸುಮಾರು 91 ಕಿಲೋಮೀಟರ್ ಆಳದಲ್ಲಿ ಈ ಕಂಪನ ಸಂಭವಿಸಿದ್ದು, ಇದರ ಕೇಂದ್ರ ಬಿಂದು 19.52 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 88.55 ಡಿಗ್ರಿ ಪೂರ್ವ ರೇಖಾಂಶಕ್ಕೆ ಇತ್ತು ಎಂದು ಅಧಿಕೃತ ಮೂಲಗಳು ಹೇಳಿವೆ.
ಭೂಕಂಪದಿಂದ ಆಗಿರುವ ಹಾನಿಯ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ ಹಾಗೂ ಸುನಾಮಿ ಎಚ್ಚರಿಕೆಯನ್ನೂ ನೀಡಿಲ್ಲ. ಕೊಲ್ಕತ್ತಾ ಮಹಾನಗರದಲ್ಲಿ ಮತ್ತು ಪಶ್ಚಿಮ ಬಂಗಾಳದ ವಿವಿಧ ಕಡೆಗಳಲ್ಲಿ ಕೂಡಾ ಕಂಪನದ ಅನುಭವ ಆಗಿದೆ.
ಭೂ ಕಂಪನದ ವೇಳೆ ದೊಡ್ಡ ಸದ್ದು ಕೇಳಿಸಿದೆ.ಕೋಲ್ಕತ್ತಾ, 24 ಪರಗಣ, ಹೌರಾ, ಹೂಗ್ಲಿ, 2 ಮಿಡ್ನಾಪುರ, ನಾಡಿಯಾ, ಬುರ್ದ್ವಾನ್-2 ಮತ್ತು ಸುತ್ತಮುತ್ತಲಿನ ಅನೇಕ ಪ್ರದೇಶಗಳಲ್ಲಿ ಬೆಳಗ್ಗೆ 6:12ಕ್ಕೆ ಭೂಮಿ ಕಂಪಿಸಿದ್ದು, ಹೆದರಿದ ಜನರು ತಮ್ಮ-ತಮ್ಮ ಮನೆಗಳಿಂದ ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.