ಸಮಗ್ರ ನ್ಯೂಸ್: 119ನೇ ಮನ್ ಕಿ ಬಾತ್ ಕಾರ್ಯಕ್ರಮ ಫೆ. 23ರಂದು ಪ್ರಸಾರವಾಯಿತು. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು ಹುಲಿ ವೇಷದ ಕುರಿತು ಪ್ರಸ್ತಾಪಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು ಹಲವು ವಿಚಾರಗಳನ್ನು ಹಂಚಿಕೊಂಡರು. ಕರ್ನಾಟಕದ ಹಲವು ವೈಶಿಷ್ಟ್ಯಗಳ ಬಗ್ಗೆ ಮಾತನಾಡುತ್ತಾ ಅವರು ರಾಜ್ಯದ ಜನಪದ ಕಲೆಯಾಗಿರುವ ಹುಲಿ ವೇಷ ಕುಣಿತವನ್ನು ಉಲ್ಲೇಖಿಸುವುದರ ಜೊತೆಗೆ ಹುಲಿ ವೇಷ ಹಾಕುವವರನ್ನೂ ಹಾಡಿ ಹೊಗಳಿದರು.
ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹುಲಿ ವೇಷ ತೊಟ್ಟು ಕುಣಿತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ. ಇದು ವಿಶೇಷ ಹಾಗೂ ಗಮನ ಸೆಳೆಯುವ ಕಾರ್ಯಕ್ರಮವಾಗಿದೆ. ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಬಿಆರ್ಟಿ ಅರಣ್ಯವಿದೆ. ಬಿಆರ್ಟಿ ಅರಣ್ಯ ಅತಿಹೆಚ್ಚು ಹುಲಿಗಳಿರುವ ಪ್ರದೇಶವಾಗಿದೆ. ಹುಲಿಗಳನ್ನು ಉಳಿಸುವುದರಲ್ಲಿ ಸ್ಥಳೀಯ ಸೋಲಿಗರ ಪಾತ್ರ ದೊಡ್ಡದಿದೆ. ಹುಲಿಗಳನ್ನು ಉಳಿಸಿರುವ ಕ್ರೆಡಿಟ್ ಸ್ಥಳೀಯ ಸೋಲಿಗರಿಗೆ ಸಲ್ಲಬೇಕು. ಈಗಲೂ ಪ್ರಾಣಿ-ಮಾನವನ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೂ ಅದನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭ ಆರೋಗ್ಯದ ಕುರಿತು ಕೆಲವು ಟಿಪ್ಸ್ ನೀಡಿದ್ದಾರೆ. ದೇಹದ ಬೊಜ್ಜು ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. 8 ಜನರ ಪೈಕಿ ಒಬ್ಬರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಶೇ. 4ರಷ್ಟು ಇದೆ. ಅಡುಗೆ ಎಣ್ಣೆ ಕಡಿಮೆ ಬಳಕೆಯಿಂದ ಬೊಜ್ಜು ತಗ್ಗಿಸಬಹುದು. ಆಹಾರದಲ್ಲಿ ಶೇ 10 ಕಡಿಮೆ ಅಡುಗೆ ಎಣ್ಣೆ ಬಳಸಲು ಸಲಹೆ. ದೇಶದಲ್ಲಿ ಬೊಜ್ಜಿನ ಸಮಸ್ಯೆ ತೀವ್ರ ಗತಿಯಲ್ಲಿ ಹೆಚ್ಚಳವಾಗುತ್ತಿದೆ ಎಂದರು.