ಸಮಗ್ರ ನ್ಯೂಸ್: ಇಂದು ನಡೆಯುವ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ.
ಈ ಪಂದ್ಯವು ದುಬೈನಲ್ಲಿ ನಡೆಯುತ್ತಿದೆ.ಈ ಪಂದ್ಯ ಪಾಕಿಸ್ತಾನದ ಪಾಲಿಗೆ ಅತ್ಯಂತ ಪ್ರಮುಖವಾಗಿದ್ದರೆ, ಬಾಂಗ್ಲಾದೇಶ ಮಣಿಸಿ ಪ್ರಾರಂಭಿಸಿದ ಭಾರತಕ್ಕೆ ಪ್ರತಿಷ್ಠೆಯ ವಿಷಯವಾಗಿದೆ. ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 60 ರನ್ ಗಳಿಂದ ಸೋತು ಟೂರ್ನಯಿಂದ ಬಹುತೇಕ ಹೊರಬಿದ್ದಿದೆ.
ಪಾಕಿಸ್ತಾನ ನಾಕೌಟ್ ಹಂತ ಪ್ರವೇಶಿಸಬೇಕಾದರೆ ಈ ಪಂದ್ಯದಲ್ಲಿ ಗೆದ್ದು , ರನ್ ಸರಾಸರಿಯಲ್ಲಿ ಮೇಲುಗೈ ಸಾಧಿಸಬೇಕಾಗಿದೆ.
ಭಾರತವು ಕಳೆದ 6 ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ ದಾಖಲೆ ಹೊಂದಿದೆ. 2024ರ ಟಿ-20 ವಿಶ್ವಕಪ್ ಗುಂಪು ಹಂತದ ಪಂದ್ಯದಲ್ಲಿ 9 ವಿಕೆಟ್ ಗಳ ಭಾರೀ ಅಂತರದಿಂದ ಗೆದ್ದು ದಾಖಲೆ ಬರೆದಿತ್ತು. ಅಹಮದಾಬಾದ್ ನಲ್ಲಿ ನಡೆದ ೨೦೨೩ರ ಏಕದಿನ ವಿಶ್ವಕಪ್ ನಲ್ಲಿ ಭಾರತ 7 ವಿಕೆಟ್ ಗಳಿಂದ ಜಯ ಸಾಧಿಸಿದ್ದು ಈಗಲೂ ಅವಿಸ್ಮರಣೀಯವಾಗಿದೆ.
ಏಕದಿನ ಪಂದ್ಯಗಳ ಮುಖಾಮುಖಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿದೆ. ಎರಡೂ ತಂಡಗಳು 157 ಬಾರಿ ಮುಖಾಮುಖಿ ಆಗಿದ್ದು, ಭಾರತ 57ರಲ್ಲಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ 73ರಲ್ಲಿ ಜಯ ಸಾಧಿಸಿದೆ. ಇನ್ನು 5 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡೂ ತಂಡಗಳು 5 ಬಾರಿ ಮುಖಾಮುಖಿ ಆಗಿದ್ದು, ಭಾರತ 2-3ರಿಂದ ಹಿನ್ನಡೆ ಅನುಭವಿಸಿದೆ. 2004ರಲ್ಲಿ ಮೊದಲ ಬಾರಿ ಮುಖಾಮುಖಿ ಆಗಿದ್ದರೆ, ಎರಡನೇ ಬಾರಿ 2017ರ ಫೈನಲ್ ನಲ್ಲಿ ಎದುರಾಗಿದ್ದವು. ಈ ಪಂದ್ಯವನ್ನು ಪಾಕಿಸ್ತಾನ 180 ರನ್ ಗಳಿಂದ ಗೆದ್ದಿತ್ತು.