ಸಮಗ್ರ ನ್ಯೂಸ್: ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಪುರುಷರೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಿ ಎಂದು ಸಿಬ್ಬಂದಿಗಳಿಗೆ ಕೆಎಸ್‌ಆರ್‌ಟಿಸಿ ಸೂಚನೆ ನೀಡಿದೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಸಾರಿಗೆ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪುರುಷ ಪ್ರಯಾಣಿಕರಿಗೆ ಸೀಟು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೀಗಾಗಿ ಪುರುಷ ಪ್ರಯಾಣಿಕರಿಗೆ ಮೀಸಲಿರುವ ಸೀಟುಗಳನ್ನು ಪುರುಷರಿಗೆ ಬಿಟ್ಟುಕೊಡಬೇಕು. ಈ ಬಗ್ಗೆ ಗಮನ ಹರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಚಾಲಕರು ಹಾಗೂ ಸಿಬ್ಬಂದಿಗೆ ಇತ್ತೀಚೆಗೆ ಆದೇಶ ಹೊರಡಿಸಿರುವುದು ಈಗ ಬೆಳಕಿಗೆ ಬಂದಿದೆ.
ಮೈಸೂರು ವಿಭಾಗದ ಘಟಕಗಳಿಂದ ಕಾರ್ಯಾಚರಣೆಯಾಗುವ ಎಲ್ಲಾ ವಾಹನಗಳಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿಸಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಕುಳಿತು ಪ್ರಯಾಣ ಮಾಡಲು ಕ್ರಮಕೈಗೊಳ್ಳುವಂತೆ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು ಸೂಚಿಸಲಾಗಿದೆ ಹಾಗೂ ತೆಗೆದುಕೊಂಡ ಕ್ರಮದ ಉರಿತು ಅನುಸರಣಾ ವರದಿ ಕಳುಹಿಸಬೇಕು ಎಂದು ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.