ಸಮಗ್ರ ನ್ಯೂಸ್: ಊರಿಗೆ ಮರಳುವ ಸಂತೋಷದಲ್ಲಿದ್ದ ಬೆಳ್ತಂಗಡಿಯ ಸಂಜಯನಗರ ನಿವಾಸಿ ಹಿದಾಯತ್ ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಊರಿಗೆ ಬರುವ ಸಂತೋಷದಲ್ಲಿದ್ದ ಹಿದಾಯತ್ ತನ್ನ ಸ್ನೇಹಿತ ರಫೀಕ್ ಎಂಬವರಿಗೆ ಕರೆ ಮಾಡಿ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತನ್ನ ಕಾರನ್ನು ತರಲು ಹೇಳಿ ಜಿದ್ದಾದಿಂದ ರಾತ್ರಿ 10:30 ರ ವಿಮಾನದಲ್ಲಿ ಹೊರಟು ಬೆಳಗಿನ ಜಾವ ಮಂಗಳೂರು ತಲುಪುವವರಿದ್ದರು.
ಜಿದ್ದಾ ವಿಮಾನ ನಿಲ್ದಾಣಕ್ಕೆ ಕಾರಲ್ಲಿ ಬಂದು ತಲುಪಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣ ಅವರನ್ನು ಅಲ್ಲಿನ ವಿಮಾನ ನಿಲ್ದಾಣದ ಪಕ್ಕದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅದಾಗಲೇ ಅವರು ಇಹಲೋಕ ತ್ಯಜಿಸಿದರು.
ಅತ್ಯುತ್ತಮ ಹಿನ್ನಲೆ ಗಾಯಕರೂ ಆಗಿದ್ದ ಅವರು ಆರಂಭದಲ್ಲಿ ಉದ್ಯೋಗ ನಿಮಿತ್ತ ಬಹರೈನ್ ಗೆ ತೆರಳಿದ್ದವರು ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿ ಕಾರ್ಗೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಮೃತರು ತಂದೆ ಅಬ್ದುಲ್ ರಝಾಕ್, ತಾಯಿ ಶಂಶೀರ ಬಾನು, ಪತ್ನಿ ರೇಷ್ಮಾ ಹಾಗೂ ಒಂದು ಗಂಡು,ಮೂರು ಹೆಣ್ಣು ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.