ಸಮಗ್ರ ನ್ಯೂಸ್: ಪ್ರತಿ ವರ್ಷದಂತೆ ಮಹಾ ಶಿವರಾತ್ರಿ ಆಚರಣೆ ಮಾಡಲು ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಲಕ್ಷಾಂತರ ಮಂದಿ ಭಕ್ತರು ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸುತ್ತಾರೆ. ಇದು ಪ್ರತಿ ವರ್ಷವೂ ನಡೆದುಕೊಂಡು ಬರುತ್ತಲೇ ಇದೆ. ಈ ವರ್ಷವೂ ಸಹ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಪಾದಯಾತ್ರಿಗಳಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.
ರಸ್ತೆಯಲ್ಲಿ ವಾಹನ ದಟ್ಟಣೆ ಇರುವ ಹಿನ್ನೆಲೆ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ, ತೋಳಿನಲ್ಲಿ, ತಲೆಯ ದಿರಿಸಿನಲ್ಲಿ ಪ್ರತಿಫಲಕ ಇರಲೇಬೇಕು. ಪಾದಯಾತ್ರೆಯಲ್ಲಿ ಬರುವಾಗ ಶಿವ ಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ. ನೀವು ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
ತಂಗುವ ಸ್ಥಳ, ಅಡುಗೆ ಮಾಡಿದ ಸ್ಥಳವನ್ನು ಸ್ವಯಂಸ್ಪೂರ್ತಿಯಿಂದ ಸ್ವಚ್ಛ ಮಾಡಿರಿ. ನೀವು ಬಳಸುವ ಪ್ಲಾಸ್ಟಿಕ್ ಮತ್ತು ಕಸ-ಕಡ್ಡಿಗಳನ್ನು ಒಂದು ಚೀಲದಲ್ಲಿ ತುಂಬಿ ತ್ಯಾಜ್ಯ ವಿಲೇವಾರಿಗೆ ಇರುವ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದೆ.
ಇನ್ನು ಕಳೆದ ವರ್ಷ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ಭಕ್ತರು ತೆರಳಿದ್ದರು.
ಲಕ್ಷಾಂತರ ಸಂಖ್ಯೆಯಲ್ಲಿ ಕನಕಪುರ, ರಾಮನಗರ, ಬಿಡದಿ, ಚನ್ನಪಟ್ಟಣ ಗ್ರಾಮದವರು ಕಾವೇರಿ ನದಿ ಸಂಗಮದ ಮೂಲಕ ಆಗಮಿಸಿದ್ದರು. ಇದಲ್ಲದೆ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಯ ಮೂಲಕ ತೆರಳಿದ್ದರು.
ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬವಾಗಿದ್ದು, ರಾತ್ರಿಯಿಡಿ ದೇವರ ಸ್ಮರಣೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಕಳೆದ ವರ್ಷವೂ ಸಹ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಲಕ್ಷಾಂತರ ಭಕ್ತರು ಭೇಟಿ ನೀಡಿದ್ದರು. ಕಳೆದ ಹತ್ತಾರು ವರ್ಷಗಳಿಂದ ಹರಕೆ ಹೊತ್ತು ಭಕ್ತಾದಿಗಳು ಹಗಲು-ರಾತ್ರಿ-ಚಳಿ-ಬಿಸಿಲೆನ್ನದೇ ಶ್ರೀ ಕ್ಷೇತ್ರಕ್ಕೆ ತೆರಳುತ್ತಿದ್ದಾರೆ.