ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್, ಮಂಗಳವಾರ ಸಂಜೆ ಬೆಂಗಳೂರಿನ ರಸ್ತೆಯೊಂದರಲ್ಲಿ ತಮ್ಮ ಕಾರಿಗೆ ಡಿಕ್ಕಿ ಹೊಡೆದ ಆಟೋ ಚಾಲಕನೊಂದಿಗೆ ವಾಗ್ವಾದದಲ್ಲಿ ತೊಡಗಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ರಾಹುಲ್ ದ್ರಾವಿಡ್ ಅವರ ಕಾರು ಮತ್ತು ಗೂಡ್ಸ್ ಆಟೋ ನಡುವೆ ಸಣ್ಣ ಅಪಘಾತ ಸಂಭವಿಸಿತ್ತು.
ಟ್ರಾಫಿಕ್‌ನಲ್ಲಿ ಸಿಲುಕಿದ್ದಾಗ ಆಟೋ ರಿಕ್ಷಾ ಹಿಂಬದಿಯಿಂದ ದ್ರಾವಿಡ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ದ್ರಾವಿಡ್, ಆಟೋ ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ದ್ರಾವಿಡ್ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಜಂಕ್ಷನ್‌ನಿಂದ ಹೈಗ್ರೌಂಡ್ಸ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯ ನಂತರ ದ್ರಾವಿಡ್ ಅವರು ಆಟೋ ಚಾಲಕನ ಸಂಪರ್ಕ ಸಂಖ್ಯೆಯನ್ನು ಪಡೆದುಕೊಂಡರು ಎನ್ನಲಾಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.