ಸಮಗ್ರ ನ್ಯೂಸ್: ಹಲವು ರಾಜ್ಯಗಳಲ್ಲಿ 150ಕ್ಕೂ ಹೆಚ್ಚು ಮನೆಗಳ್ಳತನ ನಡೆಸಿ, ಕದ್ದ ಹಣ ಹಾಗೂ ಚಿನ್ನಾಭರಣದಿಂದಲೇ ಪ್ರೇಯಸಿಗೆ ₹3 ಕೋಟಿ ವೆಚ್ಚದಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಂತರ ರಾಜ್ಯ ಕಳ್ಳ, ಮಹಾರಾಷ್ಟ್ರದ ಸೊಲ್ಲಾಪುರದ ನಿವಾಸಿ ಪಂಚಾಕ್ಷರಿ ಸಂಗಯ್ಯಸ್ವಾಮಿ(37) ಎಂಬಾತನನ್ನು ಮಡಿವಾಳ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕೋಲ್ಕತ್ತಾದಲ್ಲಿ ಪ್ರೇಯಸಿಗೆ ಮನೆ ನಿರ್ಮಿಸಿರುವ ವಿಷಯ ತನಿಖೆ ವೇಳೆ ಗೊತ್ತಾಗಿದೆ.
ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಯಿಂದ 181 ಗ್ರಾಂ ಚಿನ್ನದ ಗಟ್ಟಿ, 33 ಗ್ರಾಂ ಬೆಳ್ಳಿ ಸಾಮಗ್ರಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇವುಗಳ ಮೌಲ್ಯ ₹12.25 ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 13 ದಿನ ತಮ್ಮ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗೆ ಮದುವೆ ಆಗಿತ್ತು. 18 ವರ್ಷಗಳಿಂದ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ, ಮುಂಬೈನ ಪಬ್‌ವೊಂದರಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಗೆ ಕೋಲ್ಕತ್ತದಲ್ಲೇ ₹3 ಕೋಟಿ ವೆಚ್ಚದಲ್ಲಿ ಐಷಾರಾಮಿ ಮನೆ ನಿರ್ಮಿಸಿಕೊಟ್ಟಿದ್ದ. ಆಕೆಯ ಜನ್ಮ ದಿನಾಚರಣೆ ವೇಳೆ ₹22 ಲಕ್ಷ ಮೌಲ್ಯದ ಅಕ್ವೇರಿಯಂ ಅನ್ನು ಉಡುಗೊರೆಯಾಗಿ ನೀಡಿದ್ದ. ಅಲ್ಲದೇ ತಾಯಿ ಹೆಸರಿನಲ್ಲಿ ಬೆಂಗಳೂರಿನಲ್ಲೂ ಮನೆಯೊಂದನ್ನು ಖರೀದಿಸಿದ್ದ. ಯಾರಿಗೂ ಅನುಮಾನ ಬರಬಾರದೆಂದು ಬೆಂಗಳೂರಿನಲ್ಲಿ ಮನೆ ಖರೀದಿಗೆ ಬ್ಯಾಂಕ್‌ವೊಂದರಿಂದ ಸಾಲ ಸಹ ಪಡೆದುಕೊಂಡಿದ್ದ’ ಎಂದು ಮೂಲಗಳು ಹೇಳಿವೆ.