ಸಮಗ್ರ ನ್ಯೂಸ್: ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣ ಎಂದು ಹೇಳಲಾದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಪೊಲೀಸರು ಗುಂಡಿನ ರುಚಿ ತೋರಿಸಿದ ಪ್ರಕರಣ ಶನಿವಾರ (ಫೆ.01) ನಡೆದಿದೆ.
ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ಮುಂಬಯಿ ಧಾರಾವಿಯ ಮುರುಗಂಡಿ ಎಂಬಾತನ ಕಾಲಿಗೆ ಪೊಲೀಸರು ಗುಂಡೇಟು ಇಳಿಸಿದ್ದಾರೆ. ಕೋಟೆಕಾರು ಅಜ್ಜಿನಡ್ಕ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಪೊಲೀಸರು ಸ್ಥಳ ಮಹಜರು ನಡೆಸಲು ಆರೋಪಿ ಮುರುಗಂಡಿಯನ್ನು ಕೋಟೆಕಾರಿಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಆತ ತಪ್ಪಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಶೂಟೌಟ್ ನಡೆಸಿದ್ದಾರೆ. ಜ.17ರಂದು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಕೆ.ಸಿ.ರೋಡ್ ಶಾಖೆಯಲ್ಲಿ ಹಾಡಹಗಲೇ ದರೋಡೆ ನಡೆಸಲಾಗಿತ್ತು. ಘಟನೆ ನಡೆದು ಕೆಲವೇ ದಿನದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಮತ್ತೊಬ್ಬ ಆರೋಪಿ ಕಣ್ಣನ್ ಮಣಿ ಕೂಡಾ ತಪ್ಪಿಸಲು ಯತ್ನಿಸಿದ್ದಾಗ ಪೊಲೀಸರು ಶೂಟೌಟ್ ನಡೆಸಿ ಬಂಧಿಸಿದ್ದರು. ಮುರುಗಂಡಿ ಥೇವರ್ (36) ಈ ಹಿಂದೆ 2016ರಲ್ಲಿ ಮುಂಬಯಿಯ ಫೈನಾನ್ಸ್ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಈತನ ಮೇಲೆ ಮುಲುಂಡ್ ಸಹಿತ ಇತರ ಎರಡು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.