ಸಮಗ್ರ ನ್ಯೂಸ್: ದೇಶದ ಅತೀ ಶ್ರೀಮಂತ ದೇವಸ್ಥಾನ ಕೇರಳದ ತಿರುವನಂತಪುರಂನ ಅನಂತಪದ್ಮನಾಭ ಕ್ಷೇತ್ರ ಯಾರಿಗೆ ಗೊತ್ತಿಲ್ಲ ಹೇಳಿ. ಈ ದೇವಾಲಯದ ವಿಶೇಷತೆ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ಕ್ಷೇತ್ರದ ಪ್ರಧಾನ ಅರ್ಚಕರಾಗಿ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ ನೇಮಕಗೊಂಡಿದ್ದಾರೆ.
ಬೆಳ್ತಂಗಡಿಯ ಕೊಕ್ಕಡದ ದಿ. ಸುಬ್ರಾಯ ತೊಡ್ತಿಲ್ಲಾಯರ ಮಗನಾಗಿರುವ ಸತ್ಯನಾರಾಯಣ ತೋಡ್ತಿಲ್ಲಾಯ, ದೇವಸ್ಥಾನದಿಂದ ನೀಡಲಾಗುವ ಛತ್ರಿ ಮರ್ಯಾದೆ ಸ್ವೀಕರಿಸುವ ಮಹಾ ಪ್ರಧಾನ ಅರ್ಚಕ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇನ್ನು ಇವರ ತಂದೆ ದಿ. ಸುಬ್ರಾಯ ತೊಡ್ತಿಲ್ಲಾಯರೂ ಕೂಡ ಅನಂತ ಪದ್ಮನಾಭ ಕ್ಷೇತ್ರದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.
ಜೂ.16ರಂದು ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯ ಅವರು ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದರು. ಇದೀಗ ಮುಖ್ಯ ಅರ್ಚಕರಾಗಿ ನಿಯುಕ್ತಿಗೊಂಡ ಆರೇ ತಿಂಗಳಲ್ಲಿ ಮಹತ್ತರ ಸ್ಥಾನ ಪಡೆದ ಅರ್ಚಕ ಇವರಾಗಿದ್ದಾರೆ. ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಆಯ್ಕೆ ಇದಾಗಿದ್ದು, ಜ.30 ರಂದು ಸತ್ಯನಾರಾಯಣ ತೋಡ್ತಿಲ್ಲಾಯರವರು ಹುದ್ದೆಯ ಜವಾಬ್ದಾರಿಯನ್ನು ಸ್ವೀಕರಿಸಲಿದ್ದಾರೆ.
ಸತ್ಯನಾರಾಯಣ ತೋಡ್ತಿಲ್ಲಾಯ ಮೂಲತಃ ಕೊಕ್ಕಡ ಗ್ರಾಮದ ಬಡೆಕ್ಕರ ನಿವಾಸಿಯಾಗಿದ್ದಾರೆ. ಇವರು ದಿ. ಸುಬ್ರಾಯ ತೋಡ್ತಿಲ್ಲಾಯ ಮತ್ತು ದಿ.ಯಶೋಧ ದಂಪತಿಗಳ ಪುತ್ರ. ಇನ್ನು ಸತ್ಯನಾರಾಯಣ ಅವರ ತಂದೆ ಸುಬ್ರಾಯ ತೋಡ್ತಿಲ್ಲಾಯರು ಕೂಡ 2 ವರ್ಷಗಳ ಕಾಲ ಈ ಶ್ರೀಮಂತ ದೇವಾಲಯದಲ್ಲಿ ಕಾರ್ಯನಿರ್ವಹಿಸಿದ್ದರು. ಇನ್ನು ಇವರ ಅಜ್ಜ ದಿ.ನಾರಾಯಣ ತೋಡ್ತಿಲ್ಲಾಯರು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಹಲವು ವರ್ಷಗಳ ಕಾಲ ಪೂಜಾ ಸೇವೆಯನ್ನು ಸಲ್ಲಿಸಿದ್ದರು.