ಸಮಗ್ರ ನ್ಯೂಸ್: ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಪಂದ್ಯಾವಳಿ ನಡೆಯುವ ಕರಾಚಿ, ಲಹೋರ್ ಮತ್ತು ರಾವಲ್ಪಿಂಡಿ ಕ್ರೀಡಾಂಗಣಗಳ ನವೀಕರಣ ಕಾರ್ಯ ಸಂಪೂರ್ಣಗೊಂಡಿಲ್ಲ. ಕ್ರೀಡಾಂಗಣಗಳ ನವೀಕರಣ ಕೆಲಸ ಪೂರ್ತಿಗೊಳಿಸಲು ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಜ.30ರ ಗುಡುವು ನೀಡಿತ್ತು. ಆದರೆ ಇನ್ನೂ ಕೆಲಸ ಬಾಕಿ ಇರುವ ಕಾರಣ ಕೆಲವು ಪಂದ್ಯವನ್ನು ದುಬೈಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಪಾಕ್ ಕ್ರಿಕೆಟ್ ಮಂಡಳಿ ಮಾತ್ರ ಯಾವುದೇ ವರದಿಗೆ ಕಿವಿಗೊಡಬೇಡಿ ಎಂದು ಹೇಳುತ್ತಲೇ ಬಂದಿದೆ. ಇಂದಿನಿಂದ ಪಂದ್ಯಾವಳಿಗಳ ಟಿಕೆಟ್ ಮಾರಾಟ ಕೂಡ ಆರಂಭಗೊಳಿಸಲು ಪಿಸಿಬಿ ನಿರ್ಧರಿಸಿದೆ. ಭಾರತದ ಪಂದ್ಯಗಳು ತಟಸ್ಥ ತಾಣವಾದ ದುಬೈನಲ್ಲಿ ನಡೆಯಲಿದೆ.
ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.
ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ತಂಡಗಳ ಪೈಕಿ 7 ರಾಷ್ಟಗಳು ಈಗಾಗಲೇ ತಂಡವನ್ನು ಪ್ರಕಟಿಸಿದೆ. ಆದರೆ ಪಾಕಿಸ್ತಾನ ಇನ್ನೂ ತನ್ನ ತಂಡವನ್ನು ಪ್ರಕಟಿಸಿಲ್ಲ.