ಸಮಗ್ರ ನ್ಯೂಸ್: ಮಂಗಳೂರು ನಗರದಲ್ಲಿ ಪ್ರೇತ ಉಚ್ಚಾಟನೆ ಹಿನ್ನೆಲೆ ರಸ್ತೆ ಸಂಚಾರ ಬಂದ್ ಮಾಡಿರುವಂತಹ ಘಟನೆ ನಡೆದಿದೆ. ಕೊಟ್ಟಾರದ ಮಹಾದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ರಣಕಾಳಿ ಹಾಗೂ ಬ್ರಹ್ಮರಾಕ್ಷಸ ಅನ್ಯಪ್ರೇತ ಉಚ್ಚಾಟನೆ ಹಿನ್ನೆಲೆ ಕೊಟ್ಟಾರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾಡದಂತೆ ಬ್ಯಾನರ್ ಅಳವಡಿಸಿದ್ದು, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 3 ಗಂಟೆಯವರೆಗೆ ಜನರು ಓಡಾಡದಂತೆ ಮನವಿ ಮಾಡಲಾಗಿದೆ. ಸದ್ಯ ಪ್ರೇತ ಉಚ್ಚಾಟನೆ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂದು ಅಮವಾಸ್ಯೆ ರಾತ್ರಿ 12 ಗಂಟೆ ವೇಳೆಗೆ ಪ್ರೇತಾತ್ಮ ಉಚ್ಚಾಟನೆ ನಡೆಯಲಿದೆ. ಆಗ ಸುತ್ತಮುತ್ತ ಉಚ್ಚಾಟನೆ ವಿಧಿ ವಿಧಾನ ನಡೆಯುತ್ತೆ. ಹಾಗಾಗಿ ಈ ರೀತಿ ಮನವಿ ಮಾಡಿ ಬ್ಯಾನರ್ ಹಾಕಲಾಗಿದೆ ಎಂದು ಆಯೋಜಕರು ಹೇಳಿದ್ದಾರೆ.
ಮಂಗಳೂರು ನಗರದ ಕೊಟ್ಟಾರ ಬಳಿ ಬ್ಯಾನರ್ ಅಳವಡಿಸಿದ್ದು, ಪೂಜಾ ವಿಧಿ ನೋಡಲು ರಾತ್ರಿ ಹತ್ತು ಗಂಟೆಯ ಒಳಗೆ ದೈವಸ್ಥಾನ ಪ್ರವೇಶ ಮಾಡಲು ಮನವಿ ಮಾಡಲಾಗಿದೆ. ಪ್ರೇತ ಉಚ್ಚಾಟನೆ ವೇಳೆ ಜನ ಸಂಚಾರವಾದರೆ ತೊಂದರೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಆಯೋಜಕರು.
ಮಂಗಳೂರು ಪೊಲೀಸ್ ಇಲಾಖೆಗೂ ಆಯೋಜಕರು ಮನವಿ ಮಾಡಿದ್ದಾರೆ. ಸುಮಾರು 3-4 ಕಿಮೀ ರಸ್ತೆಯಲ್ಲಿ ವಾಹನ ಹಾಗೂ ಜನ ಸಂಚಾರವನ್ನು ನಿಷೇಧಿಸಿದ್ದು, ಅಂದರೆ ಸುಮಾರು ಐದು ಗಂಟೆಗಳ ಕಾಲ ಮಂಗಳೂರಿನ ಪ್ರಮುಖ ರಸ್ತೆ ಕೊಟ್ಟಾರ ಬಂದ್ ಆಗಲಿದೆ.