ಸಮಗ್ರ ನ್ಯೂಸ್: ಬೆಳ್ಳಂಬೆಳಗ್ಗೆ ಕಡಬದ ಹಳೆಸ್ಟೇಶನ್ ಬಳಿಯ ಪೆಟ್ರೋಲ್ ಬಂಕೊಂದಕ್ಕೆ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ವಾಹನಕ್ಕೆ ಫುಲ್‌ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡು ಹಣ ನೀಡದೆ ಸಿನಿಮೀಯ ಶೈಲಿಯಲ್ಲಿ ಪರಾರಿಯಾದ ಘಟನೆ ಜ.23ರಂದು ನಡೆದಿದೆ.
ಬೆಳಗ್ಗೆ 6 ಗಂಟೆಯ ಸುಮಾರಿಗೆ ಕೆಎ 01 ಎಂಎಕ್ಸ್ 9632 ನೋಂದಣಿ ಸಂಖ್ಯೆಯ ಥಾರ್ ಜೀಪ್‌ನಲ್ಲಿ ಬಂದ ವ್ಯಕ್ತಿ ತನ್ನ ವಾಹನಕ್ಕೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡಿದ್ದಾನೆ.
ಬಳಿಕ ಒಂದು ಕ್ಯಾನ್ ನೀಡಿ ಅದರಲ್ಲಿ ಪೆಟ್ರೋಲ್ ತುಂಬಿಸಿ ಕೊಡಲು ಬಂಕ್‌ನ ಸಿಬಂದಿಗೆ ಹೇಳಿದ್ದಾನೆ. ಪೆಟ್ರೋಲ್ ಬಂಕ್ ಸಿಬಂದಿ ಕ್ಯಾನ್‌ಗೆ ಪೆಟ್ರೋಲ್ ತುಂಬಿಸಿ ತರಲು ಹೋದಾಗ ಇತ್ತ ಕಡೆ ವಾಹನಕ್ಕೆ ಫುಲ್‌ಟ್ಯಾಂಕ್ ಡೀಸೆಲ್ ತುಂಬಿಸಿಕೊಂಡಿದ್ದ ವ್ಯಕ್ತಿ ತನ್ನ ವಾಹನದ ಜತೆ ಪರಾರಿಯಾಗಿದ್ದಾನೆ.
ನಕಲಿ ನಂಬರ್ ಪ್ಲೇಟ್
ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯದ ಆಧಾರದಲ್ಲಿ ಪೆಟ್ರೋಲ್ ಬಂಕ್‌ನ ಸಿಬಂದಿ ವಾಹನದ ನೋಂದಣಿ ಸಂಖ್ಯೆ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಆ ವೇಳೆ ವಾಹನದ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಅದೇ ನೋಂದಣಿ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಬೇರೆ ವಾಹನವಿದ್ದು, ವಂಚಕ ತನ್ನ ವಾಹನಕ್ಕೆ ಅಳವಡಿಸಿದ್ದ ನೋಂದಣಿ ಸಂಖ್ಯೆ ನಕಲಿ ಎನ್ನುವುದು ಪತ್ತೆಯಾಗಿದೆ.
ಇದೇ ರೀತಿಯ ಘಟನೆ ತಿಂಗಳ ಹಿಂದೆ ಸುಳ್ಯದ ಪೈಚಾರಿನ ಪೆಟ್ರೋಲ್ ಬಂಕ್‌ನಲ್ಲಿಯೂ ನಡೆದಿತ್ತು ಎನ್ನಲಾಗಿದ್ದು, ಅಲ್ಲಿಯೂ ಇದೇ ನೋಂದಣಿ ಸಂಖ್ಯೆಯ ಬೇರೆ ವಾಹನದಲ್ಲಿ ಬಂದು ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.