ಸಮಗ್ರ ನ್ಯೂಸ್: ಮಂಗಳೂರು ಉಳ್ಳಾಲದ ಕೋಟೆಕಾರ್ ಸಹಕಾರಿ ಬ್ಯಾಂಕ್ ನಲ್ಲಿ ನಡೆದ ದರೋಡೆ ಬಗ್ಗೆ ಈಗ ಬ್ಯಾಂಕ್ ಸಿಬ್ಬಂದಿ ಮೇಲೆಯೇ ಅನುಮಾನ ಶುರುವಾಗಿದೆ. ಬ್ಯಾಂಕ್ ಅಧ್ಯಕ್ಷರು ಮತ್ತು ಇತರರ ಹೇಳಿಕೆಗಳು ಅನುಮಾನ ಮೂಡಿಸುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಕೈವಾಡ ಇದೆ ಎಂಬ ಗುಸುಗುಸು ಕೇಳಿಬರುತ್ತಿದೆ.
ನಿನ್ನೆ(ಜ.17) ಮಧ್ಯಾಹ್ನ ಕೋಟೆಕಾರ್ ಬ್ಯಾಂಕ್ ನಲ್ಲಿ ಸಿನಿಮೀಯ ರೀತಿಯಲ್ಲಿ ನುಗ್ಗಿದ ಐವರು ದುಷ್ಕರ್ಮಿಗಳು ನೋಡ ನೋಡುತ್ತಿದ್ದಂತೇ ಕೋಟಿ ಕೋಟಿ ಹಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದೆ.
ಇದೀಗ ಬ್ಯಾಂಕ್ ಸಿಬ್ಬಂದಿ ಮೇಲೆಯೇ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ ದೂರಿನಲ್ಲಿ ಒಟ್ಟು 4 ಕೋಟಿ ರೂ. ದೋಚಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಮಾಧ್ಯಮಗಳ ಮುಂದೆ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿದ್ದೇ ಬೇರೆ.
ಅಧ್ಯಕ್ಷರ ಪ್ರಕಾರ ಸುಮಾರು 10-12 ಕೋಟಿ ರೂ. ದೋಚಿದ್ದಾರೆ. ಹೀಗಾಗಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿರುವುದು ಸ್ಥಳೀಯರ ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆಯೂ ಒಮ್ಮೆ ಇದೇ ಬ್ಯಾಂಕ್ ನಲ್ಲಿ ದರೋಡೆಯಾಗಿತ್ತು ಎನ್ನಲಾಗಿದ್ದು, ಆಗ ಬ್ಯಾಂಕ್ ಸಿಬ್ಬಂದಿಗಳದ್ದೇ ಕೈವಾಡವಿತ್ತು ಎಂದು ಸ್ಥಳೀಯರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಇದೀಗ ಬ್ಯಾಂಕ್ ಗೆ ಸಂಬಂಧಪಟ್ಟವರ ಹೇಳಿಕೆಯಲ್ಲೇ ಗೊಂದಲಗಳು ಕಂಡುಬರುತ್ತಿದೆ.