ಸಮಗ್ರ ನ್ಯೂಸ್: ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ದಾಳಿ ನಡೆಸಿದ್ದ ಓರ್ವನನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿಯನ್ನು ಬಂಧಿಸಿ ಬಾಂದ್ರಾ ಠಾಣೆಗೆ ಕರೆದುಕೊಂಡು ಬರಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸೈಫ್ ಅಲಿ ಖಾನ್ ಅವರ ನಿವಾಸದಲ್ಲೇ ಗುರುವಾರ ರಾತ್ರಿ ಹಲ್ಲೆ ನಡೆಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸೈಫ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಚಾಕುವಿನಿಂದ 6 ಬಾರಿ ಇರಿದಿದ್ದು, ಅದರಲ್ಲಿ ಎರಡು ಕಡೆ ಗಂಭೀರ ಗಾಯಗಳಾಗಿವೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ 10 ವಿಶೇಷ ತಂಡ ರಚನೆ ಮಾಡಲಾಗಿತ್ತು. ಕಳೆದ ರಾತ್ರಿ ನಟ ಸೈಫ್ ಅಲಿಖಾನ್ ಮನೆಗೆ ದುಷ್ಕರ್ಮಿಗಳು ನುಗ್ಗಿದ್ದರು. ದರೋಡೆಗೆ ಯತ್ನಿಸಿದ್ದ ವೇಳೆ ನಟ ಸೈಫ್ ಅಲಿಖಾನ್ ಮೇಲೆ ಹಲ್ಲೆ ನಡೆದಿತ್ತು. ದರೋಡೆಕೋರರಿಂದ ಚಾಕು ಇರಿತಕ್ಕೆ ಒಳಗಾಗಿರುವ ನಟ ಸೈಫ್ ಅಲಿಖಾನ್, ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ನೀಡಲಾಗಿದೆ. ದೇಹದ 6 ಕಡೆಗಳಲ್ಲಿ ಚಾಕು ಇರಿಯಲಾಗಿತ್ತು. ಸದ್ಯ ಸೈಫ್ ಅಲಿಖಾನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.