ಸಮಗ್ರ ನ್ಯೂಸ್: ಬೆಂಗಳೂರಲ್ಲಿ ಕಿಡಿಗೇಡಿಗಳು ಮೂಖ ಪ್ರಾಣಿಗಳ ಮೇಲೆ ಅಮಾನವೀಯ ಕೃತ್ಯ ಎಸಗಿದ್ದಾರೆ. ಹಾಲು ಕೊಡುವ ಕಾಮಧೇನುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆಯಲಾಗಿದೆ.
ಚಾಮರಾಜಪೇಟೆ ವಿನಾಯಕ ನಗರದ ಪೆನ್ಷನ್ ಮೊಲಾದಲ್ಲಿ ಇಂತಹದೊಂದು ಕ್ರೂರ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಮಧ್ಯರಾತ್ರಿಯೇ ಕಿಡಿಗೇಡಿಗಳು ಹಸುವಿನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇಂದು ನಸುಕಿನ ಜಾವ ಹಸುವಿನ ಮಾಲೀಕರಿಗೆ ಪಕ್ಕದ ಮನೆಯವರು ಮಾಹಿತಿ ನೀಡಿದ್ದಾರೆ. ನೀಚರ ಕೃತ್ಯಕ್ಕೆ ಮೂರು ಹಸುಗಳ ಮೂಕ ರೋಧನೆ ಮುಗಿಲು ಮುಟ್ಟಿದೆ.
3 ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರೋ ರಾಕ್ಷಸ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿನಾಯಕ ನಗರದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಿಜೆಪಿ ಸಂಸದ ಪಿ.ಸಿ ಮೋಹನ್ ಅವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದಿರುವ ಈ ಘಟನೆ ದನದ ಆಸ್ಪತ್ರೆ ಇರುವ ಹಿಂಭಾಗದಲ್ಲೇ ನಡೆದಿದೆ. ಕಳೆದ ಆರು ತಿಂಗಳ ಹಿಂದೆ ಚಾಮರಾಜಪೇಟೆ ಪಶು ಆಸ್ಪತ್ರೆಯ ಎತ್ತಂಗಡಿಗೆ ಪ್ಲ್ಯಾನ್ ಮಾಡಲಾಗಿತ್ತಂತೆ. ಈ ವೇಳೆ ಇದೇ ಹಸುಗಳನ್ನ ಮಾಲೀಕರು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ದುಷ್ಮನ್‌ಗಳು ಈ ಕೃತ್ಯ ಎಸಗಿರಬಹುದೆಂದು ಮಾಲೀಕರು ಅನುಮಾನ ವ್ಯಕ್ತಪಡಿಸಿದ್ದಾರೆ.