ಸಮಗ್ರ ನ್ಯೂಸ್ : ಆದಾಯ ತೆರಿಗೆ ದಾಳಿಯ ಬಗ್ಗೆ ನಾವು ಪ್ರತಿ ದಿನ ದೇಶಾದ್ಯಂತ ಕೇಳುತ್ತಿರುತ್ತೇವೆ. ಅನೇಕ ಬಾರಿ ಆ ಆದಾಯ ತೆರಿಗೆ ದಾಳಿಗಳಿಂದ ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಇದೀಗ ಮಧ್ಯಪ್ರದೇಶದ ಬಂಡಾದ ಬಿಜೆಪಿ ಮುಖಂಡ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
150 ಕೋಟಿ ರೂ.ಗಳ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಣ ಸೇರಿ ಹಲವು ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮೊಸಳೆಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ.ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿಜೆಪಿ ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ ಅವರ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಮೊಸಳೆಗಳು ಮತ್ತು ಇತರ ಸರೀಸೃಪಗಳನ್ನು ಪತ್ತೆಯಾಗಿರುವ ಸುದ್ದಿ ಇದೀಗ ವರದಿಯಾಗಿದೆ.
ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಭಾನುವಾರದಿಂದ ರಾಥೋಡ್ ಮತ್ತು ಬೀಡಿ ತಯಾರಕ ಮತ್ತು ಕಟ್ಟಡ ಗುತ್ತಿಗೆದಾರ ಮಾಜಿ ಕೌನ್ಸಿಲರ್ ರಾಜೇಶ್ ಕೇಶರವಾಣಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಲೇ ಇದ್ದಾರೆ.ದಾಳಿ ವೇಳೆ ಆದಾಯ ತೆರಿಗೆ ಇಲಾಖೆಯು, ಹರ್ವಾಂಶ್ ಸಿಂಗ್ ರಾಥೋಡ್ ಮನೆಯಲ್ಲಿ 14 ಕೆಜಿಯಷ್ಟು ಚಿನ್ನ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೇ 3.80 ಕೋಟಿಯಷ್ಟು ನಗದು ಪತ್ತೆಯಾಗಿದೆ. ಅಷ್ಟೇ ಅಲ್ಲ, ದಾಳಿ ವೇಳೆ ಐಷಾರಾಮಿ ವಾಹನಗಳೂ ಪತ್ತೆಯಾಗಿದ್ದು, ಮೊಸಳೆ ಮತ್ತು ಇತರ ಸಾಕು ಪ್ರಾಣಿಗಳು ಪತ್ತೆಯಾಗಿದೆ.