ಸಮಗ್ರ ನ್ಯೂಸ್ : ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಸ್ವಪಕ್ಷ ಬಿಜೆಪಿಯಲ್ಲೇ ಆಕ್ರೋಶ ವ್ಯಕ್ತವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರ ವಿರುದ್ಧ ಮೈಸೂರಿನಲ್ಲೇ ಕಾರ್ಯಕರ್ತರು ಕಿಡಿ ಕಾರಿದ್ದು, ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಪತ್ರ ಬರೆದಿದ್ದಾರೆ.
ಪ್ರತಾಪ್ ಸಿಂಹ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಪತ್ರ ಬರೆದಿದ್ದಾರೆ. ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಮಹದೇವಸ್ವಾಮಿಗೆ ಪತ್ರದ ಮೂಲಕ ಕಾರ್ಯಕರ್ತರು ಮನವಿ ಮಾಡಿದ್ದಾರೆ.ಚಾಮರಾಜ ಕ್ಷೇತ್ರದ ನಿಕಟ ಪೂರ್ವ ಉಪಾಧ್ಯಕ್ಷ ಕುಮಾರ್ ಗೌಡ, ಪರಿಶಿಷ್ಟ ಪಂಗಡಗಳ ಮೋರ್ಚಾದ ಮಾಜಿ ಅಧ್ಯಕ್ಷ ಮೈ.ಕಾ ಪ್ರೇಮ್ ಕುಮಾರ್ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ. ಪ್ರತಾಪ್ ಸಿಂಹ ಹಾಲಿ ಸಂಸದರಿಗೆ ಮುಜುಗರ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿಲ್ಲ. ಕೇವಲ ವರುಣ ವ್ಯಾಪ್ತಿಯಲ್ಲಿ ಪ್ರಚಾರ ಮಾಡಿ ಸೋಲಿಗೆ ಕಾರಣರಾದರು ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಪ್ರತಾಪ್ ಸಿಂಹ ಅವರು ವಕ್ಸ್ ವಿಚಾರದಲ್ಲಿ ಪಕ್ಷದ ಬ್ಯಾನರ್ ಅಡಿಯಲ್ಲಿ ಹೋರಾಟ ಮಾಡದೆ ವಿಜಯೇಂದ್ರ ಅವರಿಗೆ ಮುಜುಗರ ಮಾಡಿದ್ರು ಎಂದು ಕಿಡಿ ಕಾರಿದ್ದು, ಇನ್ನೂ ಅನೇಕ ಕಾರಣ ನೀಡಿ ಅವರನ್ನು ಉಚ್ಚಾಟನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.ಮೈಸೂರಿನಲ್ಲಿ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಬಿಜೆಪಿಯಲ್ಲೇ ಇದಕ್ಕೆ ಭಿನ್ನರಾಗ ಕೇಳಿಬಂದಿತ್ತು. ಹಲವು ಬಿಜೆಪಿ ನಾಯಕರು ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಮಾಜಿ ಸಂಸದ ಪ್ರತಾಪ್ ಸಿಂಹ ಮಾತ್ರ ಸಿದ್ದರಾಮಯ್ಯ ಅವರ ಹೆಸರಿಟ್ಟರೆ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಸಿಎಂ ಪರ ಬ್ಯಾಟ್ ಬೀಸಿದ್ದರು. ಇದಕ್ಕೆ ಪ್ರತಾಪ್ ಸಿಂಹ ವಿರುದ್ಧ ಸಂಸದ ಯದುವೀರ್ ಸೇರಿ ಹಲವರು ಬೇಸರ ವ್ಯಕಪಡಿಸಿದರು.ಪ್ರತಾಪ್ ಸಿಂಹಗೆ ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿದೆ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು ಇದಕ್ಕೆ ಉತ್ತರಿಸಿದ್ದ ಅವರು, ‘ಪ್ರತಾಪ್ ಸಿಂಹಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗುವ ಅನಿವಾರ್ಯತೆ ಇಲ್ಲ. ನನ್ನ ತಂದೆ ಕೂಡ ಜನಸಂಘದಿಂದ ಬಂದಿರೋರು.
ನಾನು ಕಾಂಗ್ರೆಸ್‌ಗೆ ಹೋಗಬೇಕು ಅಂತಿದ್ದರೆ ಚುನಾವಣೆ ಸಮಯದಲ್ಲೇ ಹೋಡುತ್ತಿದ್ದೆ. ಟಿಕೆಟ್ ಕೊಡ್ತೀವಿ ಬನ್ನಿ ಅಂತ ಸಾಕಷ್ಟು ಜನ ಕರೆದರು. ಅಂತಹ ಸಮಯದಲ್ಲೇ ಹೋಗಲಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದವರೆಂದು ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ವಿರುದ್ಧ ಈ ಹಿಂದೆ ಹಲವು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ವಕ್ಸ್ ವಿರುದ್ಧದ ಹೋರಾಟದಲ್ಲೂ ಪ್ರತಾಪ್ ಸಿಂಹ್ ಯತ್ನಾಳ್ ಬಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. (ಕೃಪೆ: News 18)