ಸಮಗ್ರ ನ್ಯೂಸ್: ಐಸಿಸಿ ಪ್ರಕಟಿಸಿರುವ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ 12 ವರ್ಷಗಳ ಬಳಿಕ ಮತ್ತೊಮ್ಮೆ ಪಾತಾಳಕ್ಕೆ ಕುಸಿದಿದ್ದಾರೆ. ನೂತನ ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ಕೊಹ್ಲಿ ಮೂರು ಸ್ಥಾನಗಳ ಕುಸಿತದೊಂದಿಗೆ 27ನೇ ಸ್ಥಾನದಲ್ಲಿದ್ದಾರೆ. ಡಿಸೆಂಬರ್ 2012ರಲ್ಲಿ ಕಿಂಗ್ ಕೊಹ್ಲಿ 36ನೇ ಸ್ಥಾನ ಪಡೆದಿದ್ದ ಬಳಿಕ ಅತ್ಯಂತ ಕ್ರಮಾಂಕಕ್ಕೆ ಕುಸಿದದ್ದು ಇದೇ ಮೊದಲ ಬಾರಿ. ವಿಕೆಟ್ ಕೀಪರ್ ರಿಷಭ್ ಪಂತ್ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರ ಪ್ರದರ್ಶನ ಅಷ್ಟೊಂದು ಅದ್ಭುತವಾಗಿರದಿದ್ದರೂ, ಸಿಡ್ನಿ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 61 ರನ್‌ಗಳನ್ನು ಗಳಿಸಿದ್ದರ ಫಲವಾಗಿ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದ್ದಾರೆ. ಮೂರು ಸ್ಥಾನಗಳ ಏರಿಕೆಯೊಂದಿಗೆ 9ನೇ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್‌ನ ಜೋ ರೂಟ್ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ಮೂರು ಸ್ಥಾನಗಳ ಪ್ರಗತಿಯೊಂದಿಗೆ ನಂ.6 ಕ್ಕೆ ತಲುಪಿದ್ದಾರೆ. ಜತೆಗೆ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ 769 ಅನ್ನು ಸಾಧಿಸಿದ್ದಾರೆ. ತವರಿನನಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಬವುಮಾ ಶತಕ ಬಾರಿಸಿ ಮಿಂಚಿದ್ದರು. ಭಾರತದ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ 4ನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 42, ಕೆ.ಎಲ್ ರಾಹುಲ್ 52ನೇ ಸ್ಥಾನದಲ್ಲಿದ್ದಾರೆ.
ವೇಗಿ ಜಸ್‌ಪ್ರೀತ್ ಬುಮ್ರಾ ಅವರು ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ತಲಾ ಒಂದು ಸ್ಥಾನಗಳ ಪ್ರಗತಿ ಸಾಧಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವೇಳೆ ರವೀಂದ್ರ ಜಡೇಜ ಒಂದು ಸ್ಥಾನದ ಜಿಗಿತದೊಂದಿಗೆ 9ನೇ ಸ್ಥಾನಕ್ಕೇರಿದ್ದಾರೆ.