ಸಮಗ್ರ ನ್ಯೂಸ್: ಮಂಗಳೂರು ಮಹಾನಗರ ಪಾಲಿಕೆಗೆ ಹೊಂದಿ ಕೊಂಡಂತಿರುವ ಮಧ್ಯ ಗ್ರಾಮದ ಪ್ರಮುಖ ರಸ್ತೆಗೆ ಕಾಯಕಲ್ಪ ದೊರಕಿಲ್ಲ. ಪರಿಣಾಮ ವಾಹನ ಸಂಚಾರ ಬಲುಕಷ್ಟಕರವಾಗಿದೆ.
ಸುರತ್ಕಲ್ ಮಧ್ಯ, ಪೆಡ್ಡಿಯಂಗಡಿ, ಸೂರಿಂಜೆ, ಕಾಟಿಪಳ್ಳ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಇದಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಬರಬೇಕಿರುವ ಕಾರಣ ಚೇಳ್ಯಾರು ಪಂಚಾಯತ್ ಸತತ ಬೇಡಿಕೆ ಮಂಡಿಸುತ್ತಲೇ ಇದ್ದರೂ ಅನುದಾನ ವಿಳಂಬವಾಗುತ್ತಿದೆ.
ಇದೀಗ ಮಧ್ಯ ರಸ್ತೆಯು ಹೊಂಡಗಳಿಂದ ತುಂಬಿದ್ದು, ವಾಹನ ಓಡಾಡುವುದೇ ಕಷ್ಟಸಾಧ್ಯ ವಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಎದ್ದು ಹೋಗುವುದು ಸಾಮಾನ್ಯ ಎಂಬಂತಾಗಿದೆ. ಸ್ಥಳೀಯ ನಾಗರಿಕರು ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿ ಬ್ಯಾನರ್ ಆಳವಡಿಸಿದ್ದಾರೆ.
ಸುರತ್ಕಲ್ ಹೊರವಲಯದ ಚೇಳ್ಯಾರು, ಮಧ್ಯ ಗ್ರಾಮ ಅಭಿವೃದ್ಧಿಯತ್ತ ಮುಖ ಮಾಡಿದ್ದು ಬಡಾವಣೆಗಳು ಹೆಚ್ಚುತ್ತಿದ್ದು, ವಾಹನ ಓಡಾಟ ಹೆಚ್ಚುತ್ತಿದೆ. ಇಲ್ಲಿ ಮಾದರಿ ಸರಕಾರಿ ಶಾಲೆ, ಪ.ಪೂ. ಕಾಲೇಜು, ಐಟಿಐ ಇದ್ದು ನಿತ್ಯ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಾರೆ. ಹೀಗಾಗಿ ರಸ್ತೆ ಸೌಕರ್ಯ ಅಗತ್ಯವಾಗಿದೆ.
ಮಧ್ಯ ವೃತ್ತದಿಂದ ಪೆಡ್ಡಿ ಅಂಗಡಿವರೆಗೆ ಒಟ್ಟು 3 ಕಿ.ಮೀ. ರಸ್ತೆಗೆ ಡಾಮರು ಕಾಮಗಾರಿ, ಮಳೆ ನೀರು ಹರಿಯುವ ತೋಡು ನಿರ್ಮಾಣಕ್ಕೆ 2.25 ಕೋಟಿ ರೂ. ಅನುದಾನ ಬೇಕೆಂದು ಲೋಕೋಪಯೋಗಿ ಇಲಾಖೆ ಯಿಂದ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಆದರೆ ಯೋಜನೆ ನನೆಗುದಿಗೆ ಬಿದ್ದಿದೆ.
ನಾಗರಿಕರ ಸಮಸ್ಯೆಯನ್ನು ಬಗೆ ಹರಿಸಲು ಪಂಚಾಯತ್, ಲೋಕೋಪಯೋಗಿ ಇಲಾಖೆ ಈ ನಿಟ್ಟಿನಲ್ಲಿ ಕಾಮಗಾರಿ ಶೀಘ್ರ ನಡೆಸಲು ಬೇಕಾದ ಕ್ರಮ ವನ್ನು ಕೈಗೊಳ್ಳಬೇಕು ಎಂಬುದು ನಾಗರಿಕರ, ಶಾಲಾ ವಿದ್ಯಾರ್ಥಿಗಳ ಆಗ್ರಹವಾಗಿದೆ.