ಸಮಗ್ರ ನ್ಯೂಸ್: ಜೀಕನ್ನಡ ವಾಹಿನಿಯಲ್ಲಿ ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿ ಮೆಂಬರ್ ಆಗಿ ಕಾಣಿಸಿಕೊಳ್ತಿದ್ದ ಬಹುವಾದ್ಯ ಪರಿಣಿತರಾದ ಎಸ್. ಬಾಲಿ ಎಂದೇ ಜನಪ್ರಿಯರಾದ ಎಸ್ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ. ರಿದಮ್ ಕಿಂಗ್ ಎಂದೇ ಕರೆಸಿಕೊಳ್ತಿದ್ದ ಎಸ್ ಬಾಲಿ ಅವರು 71ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಸರಿಗಮಪ ಕಾರ್ಯಕ್ರಮದಲ್ಲಿ ಜ್ಯೂರಿಯಾಗಿ ಕಾಣಿಸಿಕೊಳ್ಳುತ್ತಿದ್ದ ಎಸ್ ಬಾಲಿ ಅವರು ಸ್ಪರ್ಧಿಗಳಿಗೆ ಸ್ಕೋರ್ ನೀಡುವುದರಲ್ಲೂ ಶಿಸ್ತಿನ ಸಿಪಾಯಿಯಾಗಿದ್ದರು. ಹಲವು ವಾದ್ಯಗಳನ್ನು ನುಡಿಸುವಲ್ಲಿ ಪರಿಣಿತರಾಗಿದ್ದ ಎಸ್ ಬಾಲಿ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಖ್ಯಾತ ವಾದ್ಯಗಾರ, ಸಂಗೀತ ನಿರ್ದೇಶಕ, ಎಸ್ ಬಾಲಿ ಅವರು 1953ರ ಜನವರಿ 9ರಂದು ಬೆಂಗಳೂರಿನಲ್ಲಿ ಜನಿಸಿದ್ರು. ಚಿಕ್ಕಂದಿನಿಂದಲೇ ಬಾಲಿ ಅವರಿಗೆ ಸಂಗೀತ ಮೇಲೆ ಆಸಕ್ತಿ ಹೆಚ್ಚಿತು. ಬಾಲಿ ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಅಭ್ಯಾಸ ಮಾಡಿದ್ರು. ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ವಾದ್ಯ ಸಹಕಾರದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಸಂಗೀತ ವಿದ್ವಾಂಸರ ಜೊತೆ ಕೆಲಸ ಮಾಡಿರುವ ಬಾಲಿ ಅವರು ಮೃದಂಗ, ತಬಲ, ಢೋಲಕ್, ಢೋಲ್ಕಿ, ಖೋಲ್, ಖಂಜಿರ ಮುಂತಾದ ಹಲವಾರು ವಾದ್ಯಗಳನ್ನು ನುಡಿಸುವ ಪರಿಣತರಾಗಿದ್ರು. ಸಕಲ ವಾದ್ಯಗಳ ನುಡಿಸುತ್ತಿದ್ದ ಅಪರೂಪದ ಲಯವಾದ್ಯಗಾರರೆಂಬ ಹೆಗ್ಗಳಿಕೆಗೆ ಪಾತ್ರರಾದ ಎಸ್ ಬಾಲಿ ಅವರನ್ನು ‘ರಿದಮ್ ಕಿಂಗ್’ ಎಂದೇ ಕರೆಯುತ್ತಿದ್ರು.