ಸಮಗ್ರ ನ್ಯೂಸ್: ಕರ್ತವ್ಯದ ಬಿಡುವಿನ ವೇಳೆಯಲ್ಲಿ ಮೊಬೈಲ್‌ನಲ್ಲೇ ಪರೀಕ್ಷೆ ತಯಾರಿ ನಡೆಸಿದ ಪೊಲೀಸ್ ಜೀಪು ಚಾಲಕ ಮತ್ತು ಠಾಣಾ ಸಿಬ್ಬಂದಿಯೊಬ್ಬರು, ಪಿಎಸ್‌ಐ ಹುದ್ದೆ ಗೇರಲು ಅರ್ಹತೆ ಗಿಟ್ಟಿಸಿದ್ದಾರೆ. ಕೇವಲ ಸಾಮಾಜಿಕ ಜಾಲತಾಣ ಜಾಲಾಡಲು, ಇಲ್ಲವೆ ಗೇಮಿಂಗ್ ಹೆಚ್ಚು ಮೊಬೈಲ್ ಬಳಸುವವರ ಮಧ್ಯೆ ಸಾಧನೆಗೆ ಮೊಬೈಲ್ ಬಳಕೆ ಮಾಡಿ ಈ ಇಬ್ಬರೂ ಇತರರು ಹುಬ್ಬೇರಿಸುವಂತೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಗ್ರಾಮಾಂತರ ವಿಭಾಗದ ಕಡಬ ಪೊಲೀಸ್ ಠಾಣೆ ಗಸ್ತು ವಾಹನದ ಚಾಲಕ ಪ್ರದೀಪ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ಸಿಬ್ಬಂದಿ ಮುತ್ತಪ್ಪ ಈ ಸಾಧನೆ ಮಾಡಿದವರು.
ಪ್ರದೀಪ್ ಮತ್ತು ಮುತ್ತಪ್ಪ ಅವರಿಗೆ ಪಿಎಸ್‌ಐ ಹುದ್ದೆ ಪರೀಕ್ಷೆ ಬರೆಯುವುದು ದೊಡ್ಡ ಸವಾಲಾಗಿತ್ತು. ಬಿಡುವಿಲ್ಲದ ಕರ್ತವ್ಯದ ನಡುವೆ ಪರೀಕ್ಷೆ ಪೂರ್ವಸಿದ್ಧತೆ ಕಷ್ಟ. ಹೀಗಾಗಿ ಇವರಿಬ್ಬರು ಕಂಡುಕೊಂಡ ದಾರಿ ಮೊಬೈಲ್ ಓದು. ಪಿಎಸ್‌ಐ ಪರೀಕ್ಷೆ ಪಠ್ಯದ ತುಣುಕನ್ನು ಸಂಗ್ರಹಿಸಿ ಮೊಬೈಲ್ ಗೆ ತುಂಬಿಸಿಕೊಂಡಿದ್ದಾರೆ. ಕೆಲಸದಲ್ಲೇ ಬಿಡುವು ಸಿಕ್ಕ ಸಮಯದಲ್ಲಿ ಮೊಬೈಲ್ ನಲ್ಲೇ ಓದು ನಡೆಸಿದ್ದಾರೆ. ಮನೆಗೆ ಹೋದಾಗ ತಡರಾತ್ರಿವರೆಗೂ ಓದಿದ್ದಾರೆ. ಪರೀಕ್ಷೆ ಸಮೀಪಿಸಿದಾಗ ಇಬ್ಬರೂ ಒಂದೇ ಕಡೆಸೇರಿ ತಯಾರಿ ನಡೆಸಿದ್ದಾರೆ. ಇಬ್ಬರೂ ಯಶಸ್ಸು ಕಂಡಿದ್ದಾರೆ. ಟ್ಯೂಷನ್ ತೆಗೆದುಕೊಂಡಿಲ್ಲ ಎನ್ನುವುದು ಗಮನಾರ್ಹ ಅಂಶ.
ಇದೀಗ ನಾಗರಿಕ ಪೊಲೀಸ್ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪ್ರದೀಪ್ ಹಾಗೂ ಮುತ್ತಪ್ಪ ಅವರು ಪಿಎಸ್‌ಐ ಹುದ್ದೆಗೆ ಆಯ್ಕೆಯಾಗುವ ಅವಕಾಶ ಪಡೆದಿದ್ದಾರೆ. ಹಲವು ವರ್ಷಗಳ ಅಧಿಕಾರಿ ಹುದ್ದೆ ಕನಸು ಈಡೇರುವ ಸಮಯ ಬಂದಿದೆ.
ಪ್ರದೀಪ್ ಹಾಸನ ಜಿಲ್ಲೆ ಹೊಳೆನರಸೀಪುರ ಆವಿನಮಾರನ ಹಳ್ಳಿ ಬಡ ಕುಟುಂಬದವರು. ತಂದೆ-ತಾಯಿ ಕೃಷಿಕರು, ಮೂವರಲ್ಲಿ ಎರಡನೇ ಮಗ. ಈಗವರಿಗೆ ಇಬ್ಬರುಮಕ್ಕಳಿದ್ದಾರೆ. ಪತ್ನಿ ಪ್ರೋತ್ಸಾಹದಿಂದ ಪಿಎಸ್‌ಐ ಹುದ್ದೆ ಪರೀಕ್ಷೆಗೆ ಬರೆಯಲು ಸಾಧ್ಯವಾಯಿತು ಎನ್ನುವ ಇವರು, ಸಮಾಜಕ್ಕೆ ಒಳ್ಳೆಯ ಸೇವೆ ನೀಡಬೇಕು ಎಂಬ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.
ಮುತ್ತಪ್ಪ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸೂಳೆಬಾವಿ ಗ್ರಾಮದವರು. ತಂದೆ-ತಾಯಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಐದನೇ ಮಗ, ಅವಿವಾಹಿತರು. ಪೋಷಕರನ್ನು ಚೆನ್ನಾಗಿ ನೋಡಿಕೊಂಡು ಸಮಾಜಕ್ಕೆ ಉತ್ತಮ ಸೇವೆ ನೀಡುವ ಉದ್ದೇಶ ಹೊಂದಿದ್ದಾಗಿ ತಿಳಿಸಿದ್ದಾರೆ.
2021ರಲ್ಲಿ ಪೊಲೀಸ್ ಇಲಾಖೆ 545 ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಇವರಿಬ್ಬರೂ ಉತ್ತೀರ್ಣರಾಗಿದ್ದರು. ಪ್ರದೀಪ್ ರಾಜ್ಯಕ್ಕೆ 13ನೇ ಬ್ಯಾಂಕ್ ಕೂಡ ಗಳಿಸಿದ್ದರು. ಆದರೆ ಅಕ್ರಮ ಕಾರಣ ಪ್ರಕರಣ ಕೋರ್ಟಿಗೆ ಹೋಯಿತು. ಈ ನಡುವೆ 2024ರಲ್ಲಿ ಎರಡನೇ ಬಾರಿಗೆ ಪಿಎಸ್‌ಐ ಹುದ್ದೆ ಪರೀಕ್ಷೆ ಬರೆದು ಯಶಸ್ಸು ಕಂಡರು. ನೇಮಕಾತಿ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಾಗಿದೆ.
ಸಾಧನೆ ಮಾಡಿದ್ದು ಹೇಗೆ?
*2021ರ ಪಿಎಸ್‌ಐ ಪರೀಕ್ಷೆಯಲ್ಲಿ ಇಬ್ಬರೂ ಉತ್ತೀರ್ಣ
- ಆದರೆ ಅಕ್ರಮದ ಕಾರಣದ ನೇಮಕ ನೆನೆಗುದಿಗೆ ಬಿದ್ದಿತ್ತು
- ಛಲ ಬಿಡದೇ ಮತ್ತೊಂದು ಎಸ್‌ಐ ಪರೀಕ್ಷೆಗೆ ಹಾಜರಿ
- ಕರ್ತವ್ಯದ ವೇಳೆ ಮೊಬೈಲಲ್ಲೇ ಪಾಠಗಳ ಅಧ್ಯಯನ
- ಕೋಚಿಂಗ್ ಗೂ ಹೋಗದೇ ಪಾಸಾದ ಚಾಲಕ, ಪೇದೆ