ಸಮಗ್ರ ನ್ಯೂಸ್: ಐಪಿಎಲ್‌ನ ನೂತನ ಆವೃತ್ತಿಯ ಆರಂಭಕ್ಕೆ ಇನ್ನು ಮೂರು ತಿಂಗಳು ಮಾತ್ರ ಬಾಕಿ ಉಳಿದಿದ್ದು, ಗುಜರಾತ್ ಟೈಟಾನ್ಸ್ ತಂಡದ ಸಾರಥ್ಯ ಶುಭಮಾನ್ ಗಿಲ್ ಕೈತಪ್ಪುವ ಸಾಧ್ಯತೆಯೊಂದು ಕಂಡು ಬಂದಿದೆ. ಅಫ್ಘಾನಿಸ್ತಾನ ಆಲ್ರೌಂಡರ್ ರಶೀದ್ ಖಾನ್ ನೂತನ ನಾಯಕನಾಗಿ ನೇಮಕವಾಗುವ ಸುಳಿವೊಂದನ್ನು ಸ್ವತಃ ಫ್ರಾಂಚೈಸಿಯೇ ಬಿಟ್ಟುಕೊಟ್ಟಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಜೆರ್ಸಿ ನಂ.19 ಧರಿಸಿ ಬೆನ್ನು ತೋರಿಸಿರುವ ರಶೀದ್ ಖಾನ್ ಅವರ ಚಿತ್ರವಿದ್ದು, ‘ದಿ 2025 ಜಿಟಿ ಸ್ಟೋರಿ’ ಎಂದು ಬರೆದುಕೊಂಡಿದೆ. ಇದಕ್ಕೆ ‘ಸ್ಪಷ್ಟವಾದ ಬೋರ್ಡ್, ಹೊಸ ಕಥೆ’ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಹೀಗಾಗಿ ಈ ಬಾರಿ ಗುಜರಾತ್ ಹೊಸ ನಾಯಕನ ಸಾರಥ್ಯದೊಂದಿಗೆ ಕಣಕ್ಕಿಳಿಯುವುದು ಖಚಿತ ಎನ್ನುವಂತಿದೆ.
ಮೆಗಾ ಹರಾಜಿಗೂ ಮುನ್ನ ನಡೆದಿದ್ದ ರಿಟೇನ್ ಪ್ರಕ್ರಿಯೆಯಲ್ಲಿ ಗುಜರಾತ್ ತಂಡ ಶುಭಮನ್ ಗಿಲ್ ಸಂಭಾವನೆಯಲ್ಲಿ ಕಡಿತಗೊಳಿಸಿ ರಶೀದ್ ಖಾನ್‌ಗೆ ಅತ್ಯಧಿಕ ಮೊತ್ತ ನೀಡಿತ್ತು. ಇದೀಗ ಫ್ರಾಂಚೈಸಿಯ ಪೋಸ್ಟ್ ನೋಡುವಾಗ ನಾಯಕತ್ವ ನೀಡುವ ಸಲುವಾಗಿಯೇ ಅವರಿಗೆ ಅತ್ಯಧಿಕ ಮೊತ್ತ ನೀಡಿದಂತಿದೆ. ರಶೀದ್ ಖಾನ್ ನಾಯಕತ್ವದಲ್ಲಿ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಅಫಘಾನಿಸ್ತಾನ ತಂಡ ಆಸ್ಟ್ರೇಲಿಯಾವನ್ನು ಕೂಡ ಮಣಿಸಿ ಸೆಮಿಫೈನಲ್ ತಲುಪಿತ್ತು. ಟಿ20 ಮಾದರಿಯಲ್ಲಿ ರಶೀದ್ ಒಟ್ಟು 6 ತಂಡಗಳಿಗೆ ನಾಯಕನಾಗಿ ಕಾರ್ಯನಿರ್ವಹಿಸಿದ್ದು, 67 ಪಂದ್ಯಗಳಲ್ಲಿ 34 ಗೆಲುವು ಕಂಡಿದ್ದಾರೆ. ಕಳದ ಆವೃತ್ತಿಯಲ್ಲಿ ಗುಜರಾತ್ ತಂಡ ಗಿಲ್ ಸಾರಥ್ಯದಲ್ಲಿ 8ನೇ ಸ್ಥಾನಕ್ಕೆ ಸಮಾಧಾನ ಕಂಡಿತ್ತು.